ನೆಟ್‍ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್

Public TV
2 Min Read
MDK Attanige School

ಮಡಿಕೇರಿ: ಪುಟ್ಟ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ನಗರ ಪ್ರದೇಶದಿಂದ ಹಿಡಿದು ಗ್ರಾಮೀಣ ಪ್ರದೇಶದ ಎಲ್ಲೆಡೆಯೂ ಇದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಹೆಚ್ಚಿದೆ. ಇನ್ನು ಮಳೆಗಾಲದಲ್ಲಂತೂ ಸಮಸ್ಯೆ ಮತ್ತಷ್ಟೂ ಹೆಚ್ಚಾಗುತ್ತದೆ. ಏಕೆಂದರೆ ಮಳೆ, ಗಾಳಿಗೆ ವಿದ್ಯುತ್ ಕಡಿತಗೊಂಡಾಗ ಗಂಟೆಗಟ್ಟಲೇ ಮೊಬೈಲ್ ಟವರ್ ಗಳು ಡೀಸೆಲ್‍ನಿಂದ ಓಡಬೇಕಾಗುತ್ತದೆ.

ಇಂದಿನ ಡೀಸೆಲ್ ದರಕ್ಕೆ ಜೊತೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ನ ಆರ್ಥಿಕ ದುಸ್ಥಿತಿಗೆ ಕೆಲವೊಮ್ಮೆ ದಿನಗಟ್ಟಲೇ ನೆಟ್‍ವರ್ಕ್ ಸಿಗುವುದಿಲ್ಲ. ಆದರೆ ನೆಟ್‍ವರ್ಕ್ ಇದ್ದಾಗಲಾದರೂ ಅನ್‍ಲೈನ್ ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಪಬ್ಲಿಕ್ ಹೀರೋ ಸತೀಶ್ ಶಿಕ್ಷಕ ಮುಂದಾಗಿದ್ದಾರೆ. ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್, 20 ಅಡಿ ಎತ್ತರದಲ್ಲಿ ಮರದ ಅಟ್ಟಣಿಗೆ ನಿರ್ಮಿಸಿ ಆನ್‍ಲೈನ್ ಕ್ಲಾಸ್ ಮಾಡಲು ಉಪಾಯ ಕಂಡುಕೊಂಡಿದ್ದಾರೆ.

MDK Attanige School 2 medium

ಚಿಕ್ಕಕೊಳತ್ತೂರು ಗ್ರಾಮದ ಮನೆಯ ಆವರಣದಲ್ಲಿ ಬೊಂಬು, ಬೈನೆ ಮರದ ತಡಿಕೆಗಳು, ತಂತಿ, ಬಲೆ ಹಾಗೂ ಹುಲ್ಲು ಬಳಸಿ ‘ಟ್ರೀ ಹೌಸ್’ ಮಾದರಿಯಲ್ಲಿ ತರಗತಿ ಕೋಣೆ ನಿರ್ಮಿಸಿದ್ದಾರೆ. ಮೊಬೈಲ್ ಫೋನ್ ಬಳಸಿ ಅವರು ತರಗತಿ ನಡೆಸುತ್ತಾರೆ. 500 ರೂ. ವೆಚ್ಚದ ಮೊಬೈಲ್ ಸ್ಟ್ಯಾಂಡ್ ಮತ್ತು ರೆಕಾರ್ಡರ್ ಖರೀದಿಸಿ ಬೋಧನೆಗೆ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂಥ ಚಟುವಟಿಕೆಗಳನ್ನು ಮಾಡಿಸುತ್ತಾರೆ.

ಪಾಠ ಮಾಡಲು 3 ಬಗೆಯ ಕಪ್ಪು ಹಲಗೆಗಳು ಹಾಗೂ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸುತ್ತಾರೆ. ಪಠ್ಯದ ಜೊತೆಗೆ ಯೋಗಾಸನ, ಒಳಾಂಗಣ ಆಟಗಳು, ಕಥೆ, ಇಂಗ್ಲಿಷ್, ಸಾಕು ಪ್ರಾಣಿಗಳ ಮಾಹಿತಿ ನೀಡುತ್ತಾರೆ. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದಾರೆ.

MDK Attanige School 1 medium

ಲಾಕ್‍ಡೌನ್ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕಲಿಕಾ ಸಂಪರ್ಕ ಸಾಧಿಸುವ ಕಾರ್ಯಕ್ರಮ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಇರುವ ಮಕ್ಕಳಿಗೆ ಆನ್‍ಲೈನ್ ಮೂಲಕ ಬೋಧನೆ, ವಾಟ್ಸಪ್ ಮೂಲಕ ಹೋಮ್‍ವರ್ಕ್ ಮಾಡಿಸುತ್ತಾರೆ. ನೆಟ್‍ವರ್ಕ್ ಸಮಸ್ಯೆ ಇದ್ದರೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಸತೀಶ್ ಅವರು ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವುದು ವಿಶೇಷವಾಗಿದೆ. ಒಟ್ನಲ್ಲಿ ನೆಟ್‍ವರ್ಕ್ ಸಿಗುವುದಿಲ್ಲ ಎಂಬ ಒಂದೇ ಕಾರಣ ಮುಂದೊಡ್ಡಿ, ದಿನಗಟ್ಟಲೇ ರಜೆ ಮಾಡಿಕೊಳ್ಳುವ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಇರುವಾಗ, ಸ್ವಂತ ಹಣ ವೆಚ್ಚ ಮಾಡಿ ತರಗತಿ ನಡೆಸುತ್ತಿರುವ ಶಿಕ್ಷಕ ಸತೀಶ್‍ರವರ ಸೇವೆಗೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು

Share This Article
Leave a Comment

Leave a Reply

Your email address will not be published. Required fields are marked *