– ಹಗಲು ಬೀಳುವ ಕನಸು ತುಂಬಾನೇ ಡೇಂಜರ್
ಗದಗ: ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ. ಹಗಲು ಬೀಳುವ ಕನಸು ತುಂಬಾನೇ ಡೇಂಜರ್ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆಶಿ ನಾನೇ ಸಿಎಂ ಅಂತಿದ್ದಾರೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಅವರಲ್ಲೆ ಕುಸ್ತಿ ಹಿಡದಿದ್ದು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದರು. ಸಿಎಂ ಆಗಬೇಕು ಅಂದರೆ ಬಿಜೆಪಿಯಲ್ಲಿ ಒಂದು ಸಿಸ್ಟಮ್ ಇದೆ. ಕಾಂಗ್ರೆಸ್ ನಲ್ಲಿ ಮತ್ತೊಂದು ಸಿಸ್ಟಮ್ ಇದೆ. ಬಿಜೆಪಿಯಲ್ಲಿ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಆರಿಸುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಹಾಗಿಲ್ಲ. ಎದುರಾಳಿಯಿಂದ ಸಿಎಂ ಹೆಸರಿನ ಚೀಟಿ ಬರುತ್ತೆ. ಆ ಚೀಟಿಯಲ್ಲಿ ಯಾರ ಹೆಸರು ಇರುತ್ತದೆ ಎಂಬುವುದು ಯಾರಿಗೂ ಗೊತ್ತಿರಲ್ಲ. ಕನಸು ಕಾಣಬೇಕು, ಆದರೆ ಹಗಲು ಕನಸು ಭಾರೀ ಡೇಂಜರ್ ಎಂದರು.
ಗದಗನ ಮಿರ್ಚಿ ಕಥೆ ಹೇಳಿ ಕಾಂಗ್ರೆಸ್ ನಾಯಕರಿಗೆ ಅಪಹಾಸ್ಯ ಮಾಡಿದರು. ತೋಂಟದಾರ್ಯ ಮಠದ ಸ್ವಾಮೀಜಿ ಈ ಹಿಂದೆ ಕಥೆಯೊಂದನ್ನು ಹೇಳುತ್ತಿದ್ದರು. ಅದೇನೆಂದರೆ, ಮಠದ ಎದುರಿಗೆ ಒಬ್ಬ ವ್ಯಕ್ತಿ ಕೂತು ಏನೋ ತಿಂದ ಹಾಗೆ ಮಾಡುತ್ತಿದ್ದನಂತೆ. ಸಾಕಾಗಿ ಒಂದೊಮ್ಮೆ ಸ್ವಾಮಿಗಳು ಆ ವ್ಯಕ್ತಿ ಕೇಳಿದರೆ, ಗದುಗಿನ ಮಿರ್ಚಿ ತಿಂದ ಹಾಗೇ ಸುಮ್ನೆ ಕಲ್ಪನೆ ಮಾಡುತ್ತಿದ್ದೇನೆ ಎಂದಿದ್ದನಂತೆ. ಆಗ ಸ್ವಾಮಿಜಿ ಹೇಳಿದರಂತೆ ತಿಂದ ಹಾಗೆ ಮಾಡುವುದಾದರೆ ಮಿರ್ಚಿ ಜೊತೆಗೆ ಧಾರವಾಡ ಪೇಡಾ ತಿನ್ನು. ಗೋಕಾಕ್ ಕರದಂಟು ತಿನ್ನು, ಬೆಳಗಾವಿ ಕುಂದಾ ತಿನ್ನು ಇಲ್ಲದಿರುವುದನ್ನು ಯಾಕೆ ಕಲ್ಪನೆ ಮಾಡಿಕೊತಿಯಾ ಅಂದರಂತೆ. ಹಾಗೇ ಕನಸು ಕಾಣೋದಾದರೆ ಪ್ರಧಾನ ಮಂತ್ರಿಯಾಗುವುದನ್ನು ಕಾಣಲಿ, ವಲ್ರ್ಡ್ ಬ್ಯಾಂಕ್ ಅಧ್ಯಕ್ಷ ಆಗುವುದನ್ನ ಕಾಣಲಿ, ಅದನ್ನು ಬಿಟ್ಟು ಮುಂದಿನ ಸಿಎಂಗಾಗಿ ಕಾಂಗ್ರೆಸ್ ಕಂಡ ಕನಸು, ಹಗಲು ಕನಸು ಎಂದು ಕಥೆಯ ಮೂಲಕ ಅಪಹಾಸ್ಯ ಮಾಡಿದರು.
ನಂತರ ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟದ ರಚನೆ ಕುರಿತು, ಸ್ವಾಮೀಜಿಗಳು, ಜಗದ್ಗುರು ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ಏಕೆಂದರೆ ಧರ್ಮೊಪದೇಶ ಮಾಡುವ ಕಾವಿ ಧಾರಿಗಳು ತಮ್ಮಷ್ಟಕ್ಕೆ ತಾವೇ ಯೋಚಿಸಬೇಕು. ಸಮಾಜದ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಗ್ರೂಪಿಸಮ್ ಮಾಡಬಾರದು. ಗ್ರೂಪ್ ಮಾಡುವುದಾದರೆ ಸ್ವಾಮಿಗಳು ಹಾಗೂ ರಾಜಕಾರಣಿಗಳ ಮಧ್ಯೆ ವ್ಯತ್ಯಾಸ ಏನುಳಿತು ಎಂದು ಮಠಾಧೀಶರ ವಿರುದ್ಧ ಬೇಸರ ವ್ಯಕ್ತಪಡಿಸಿದರು.