ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

Public TV
2 Min Read
smg eshwarappa tunga dam

ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನ ತವರು ಶಿವಮೊಗ್ಗದಲ್ಲಿ ಒಂದೇ ಸಮನೆ ವರುಣ ಅಬ್ಬರಿಸಿದ್ದು, ಆಗಾಗ್ಗೆ ಮಳೆ ಸುರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಿರಂತರವಾಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತುಂಬಿದ ತುಂಗೆಗೆ ಬಾಗಿನ ಸಮರ್ಪಿಸಿದ್ದಾರೆ.

smg tunga dam 1 medium

ಜಿಲ್ಲೆಯ ಗಾಜನೂರು ತುಂಗಾ ಜಲಾಶಯ ಪ್ರತಿ ವರ್ಷ ಬೇಗ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಗಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ. ಹೀಗಾಗಿ ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

588.24 ಮೀಟರ್ ಎತ್ತರ ಇರುವ ಗಾಜನೂರು ಜಲಾಶಯದಲ್ಲಿ ನೀರಿನ ಮಟ್ಟ 587.69 ಮೀಟರ್ ತಲುಪಿದ ಕಾರಣ ಎಲ್ಲ ಗೇಟ್ ಗಳಿಂದ ನೀರು ಹೊರ ಬಿಡಲಾಗಿದೆ. ಈ ತುಂಗಾ ಜಲಾಶಯ 3.25 ಟಿಎಂಸಿ ಸಾಮಥ್ರ್ಯದ್ದಾಗಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಡ್ಯಾಂ ಭರ್ತಿಯಾಗಿ ನಳನಳಿಸುತ್ತಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ.

smg tunga dam 4 medium

ಮಲೆನಾಡಿನ ತವರು ಎಂದೆನಿಸಿಕೊಳ್ಳುವ ಶಿವಮೊಗ್ಗದ ಕೇಂದ್ರ ಬಿಂದುವಾಗಿರುವ ಗಾಜನೂರು ಜಲಾಶಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದ್ದು, ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ಡ್ಯಾಂ ಗೆ ಮತ್ತಷ್ಟು ಜೀವ ಕಳೆ ಬಂದಂತಾಗಿದೆ. ತುಂಗೆಯ ಮೂಲ ಸೆಲೆಯಾಗಿರುವ ಶೃಂಗೇರಿ, ಕೊಪ್ಪ ಭಾಗದ ಪ್ರದೇಶದಲ್ಲಿ ಯಥೇಚ್ಛ ಮಳೆಯಾಗುತ್ತಿರುವ ಕಾರಣ ರಾಜ್ಯದಲ್ಲಿಯೇ ಭರ್ತಿಯಾಗಿರುವ ಪ್ರಥಮ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 22 ಕ್ರಸ್ಟ್ ಗೇಟ್ ಗಳಿದ್ದು, ಎಲ್ಲ ಗೇಟುಗಳಿಂದ ನದಿಗೆ ನೀರು ಹರಿಬಿಡಲಾಗಿದೆ. ಕೊರೊನಾ ಕಾಟದಿಂದ ಪ್ರವಾಸಿಗರಿಗೆ ಪ್ರವೇಶ ನಿಷಿದ್ಧವಾಗಿದ್ದು, ಇದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

smg tunga dam 3 medium

ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕಿನಾದ್ಯಂತ ಮಳೆ ಬಿರುಸಾಗಿದ್ದು, ಹಳ್ಳ-ಕೊಳ್ಳ ನದಿಗಳಿಗೆ ನೀರು ಹರಿದು ಬಂದಿದೆ. ತುಂಗಾ, ಭದ್ರಾ, ಮಾಲತಿ, ಶರಾವತಿ, ವರದಾ, ಕುಮುದ್ವತಿ ನದಿಗಳು ಸೇರಿದಂತೆ, ದೊಡ್ಡ, ದೊಡ್ಡ ಹಳ್ಳಗಳು ನೀರಿನಿಂದ ತುಂಬಿವೆ. ಹೀಗಾಗಿ ಜಿಲ್ಲೆಯ ರೈತರು ಹಾಗೂ ನಾಗರೀಕರಲ್ಲಿ ಹರ್ಷ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *