ಯೂಟ್ಯೂಬ್‍ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್

Public TV
1 Min Read
ctd arrest

ಚಿತ್ರದುರ್ಗ: ಕಳೆದ ಆರು ತಿಂಗಳಿನಿಂದ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ನಗರದ ಪೊಲೀಸರು ಮುದ್ದಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

ತಾಲೂಕಿನ ಮುದ್ದಾಪುರ ಹೊಸಹಟ್ಟಿ ಗ್ರಾಮದ ಉದಯ್(21), ಉಮ್ಮೇಶ್(22) ಹಾಗೂ ಕೀರ್ತಿ(21) ಬಂಧಿತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 190 ಗ್ರಾಂ.ನ 9 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪ್ರತಿಷ್ಟಿತ ಕುಟುಂಬದಲ್ಲಿ ಜನಿಸಿದ ಯುವಕರಾಗಿದ್ದು, ಕಳೆದ ಆರು ತಿಂಗಳಿನಿಂದ ನಗರದ ಹೊರವಲಯದ ಫ್ಲೈ ಓವರ್ ಹಾಗೂ ನಿರ್ಜನ ಪ್ರದೇಶದಲ್ಲಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಸರಗಳ್ಳರು, ಪಲ್ಸರ್ ಬೈಕಿನಲ್ಲಿ ಬಂದು ಸರ ಕದ್ದೊಯ್ಯುತ್ತಿದ್ದರು.

ctd arrest 2 2 medium

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 3, ಬಡಾವಣೆ ಠಾಣೆಯಲ್ಲಿ 3 ಹಾಗೂ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು. ಸರಗಳ್ಳರನ್ನು ಪತ್ತೆ ಹಚ್ಚಲು ಚಿತ್ರದುರ್ಗ ಪೊಲೀಸರನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು. ಸರಗಳ್ಳರ ಚಲನವಲನಗಳನ್ನು ಅರಿತ ಪೊಲೀಸರ ತಂಡ, ಮುದ್ದಾಪುರ, ಹೊಸಹಟ್ಟಿ ಗ್ರಾಮದ ಉದಯ, ಉಮ್ಮೇಶ್ ಹಾಗೂ ಕೀರ್ತಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ. ತಿಳಿಸಿದ್ದಾರೆ.

ctd sp radhika medium

ಯೂಟ್ಯೂಬ್ ನೋಡಿ ಕಳ್ಳತನ ಕಲಿತರು
ಮೊದಲು ಉದಯ್ ಎಂಬ ಯುವಕ ಯುಟ್ಯೂಬ್ ನೋಡಿಕೊಂಡು ಸರಗಳ್ಳತನ ಮಾಡಲು ಮುಂದಾಗಿದ್ದನು, ಇದರಲ್ಲಿ ಒಬ್ಬನೇ ಯಶಸ್ಸು ಕಾಣಲು ಸಾಧ್ಯವಾಗದ ಕಾರಣ ಉಮ್ಮೇಶ್ ಹಾಗೂ ಕೀರ್ತಿ ಎಂಬ ಯುವಕರನ್ನು ಬಳಸಿಕೊಂಡು ಒಂದು ತಂಡವಾಗಿ ಸರಗಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡುವ ವೇಳೆ ವಾಹನದ ನಂಬರ್ ಪ್ಲೇಟ್ ತೆಗೆದುಹಾಕಿ ಸರಗಳ್ಳತನ ಮಾಡಿ, ನಂತರ ನಂಬರ್ ಪ್ಲೇಟ್ ಹಾಕುತ್ತಿದ್ದರು. ಇವರನ್ನು ಶನಿವಾರ ಮುದ್ದಾಪುರ ಹತ್ತಿರ ಬಂಧಿಸಿ, 10 ಲಕ್ಷ ರೂ. ಮೌಲ್ಯದ 190 ಗ್ರಾಂ.ನ 9 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ctd arrest 2 1 medium

ಕಳ್ಳತನ ಮಾಡಿದ್ದ ಚಿನ್ನ ಖರೀದಿಸುತ್ತಿದ್ದ ಅಂಗಡಿಯ ಮಾಲೀಕ ವಿನಯ್ ಹಾಗೂ ಯಶವಂತ್ ಅವರನ್ನು ಸಹ ಬಂಧಿಸಲಾಗಿದೆ ಎಂದು ವಿವರಿಸಿದರು. ಎಸ್‍ಪಿ ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಧೀಕ್ಷಕ ಮಹಾಲಿಂಗ ನಂದಾಗಾಂವಿ, ಡಿವೈಎಸ್ಪಿ ಪಾಂಡುರಂಗಪ್ಪ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *