ಸಂಚಾರಿ ವಿಜಯ್ ಔಟ್ ಆಫ್ ಡೇಂಜರ್: ನೀನಾಸಂ ಸತೀಶ್

Public TV
2 Min Read
satish ninasam

– ಇನ್ನೂ ಪ್ರಜ್ಞೆ ಬಂದಿಲ್ಲ, 24 ಗಂಟೆ ಅಬ್ಸರ್ವೇಶನ್‍ನಲ್ಲಿಟ್ಟಿದ್ದಾರೆ
– ಕಳೆದ ಹಲವು ದಿನಗಳಿಂದ ಫುಡ್ ಕಿಟ್ ಹಂಚುತ್ತಿದ್ದರು

ಬೆಂಗಳೂರು: ನಟ ಸಂಚಾರಿ ವಿಜಯ್ ಅವರನ್ನು 24 ಗಂಟೆಗಳ ಕಾಲ ಅಬ್ಸರ್ವೇಶನ್‍ನಲ್ಲಿಟ್ಟಿದ್ದಾರೆ, ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿರುವುದಾಗಿ ನಟ ನೀನಾಸಂ ಸತೀಶ್ ಮಾಹಿತಿ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡಿ ಸಂಚಾರಿ ವಿಜಯ್ ಅವರನ್ನು ನೊಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಚಾರಿ ವಿಜಯ್ ಅವರ ಪಲ್ಸ್ ರೇಟ್, ಬಿಪಿ ಎಲ್ಲ ನಾರ್ಮಲ್ ಇದೆ. ಆಪರೇಷನ್ ಮಾಡುವಾಗ ಅರವಳಿಕೆ ನೀಡಿರುವುದರಿಂದ ಪ್ರಜ್ಞೆ ಇನ್ನೂ ಬಂದಿಲ್ಲ. ವೈದ್ಯರು 24 ಗಂಟೆಗಳ ಕಾಲ ಅಬ್ಸರ್ವೇಶನ್‍ನಲ್ಲಿ ಇಟ್ಟಿದ್ದಾರೆ. ಆದರೆ ಪ್ರಜ್ಞೆ ಬರುತ್ತದೆ, ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿದ್ದಾರೆ.

sanchari vijay 1 medium

ಸ್ವತಃ ನಾನೇ ಐಸಿಯು ಒಳಗಡೆ ಹೋಗಿದ್ದೆ, ಪಲ್ಸ್ ರೇಟ್, ಬಿಪಿ ನಾರ್ಮಲ್, ಜೀವಕ್ಕೆ ತೊಂದರೆ ಇಲ್ಲ. ಆದರೆ ಕೆಲವು ಕಡೆ ಜೀವಕ್ಕೆ ಅಪಾಯ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆ ರೀತಿ ಇಲ್ಲ, ನಾನು ಮನ್ಸೂರೆ ಒಟ್ಟಿಗೆ ಹೋಗಿ ನೋಡಿ ಬಂದೆವು, ಆರಾಮಾಗಿದ್ದಾರೆ. ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕಷ್ಟೆ. ಅವರ ಜೊತೆಗಿದ್ದ ನವೀನ್ ಅವರಿಗೂ ಏನೂ ತೊಂದರೆ ಇಲ್ಲ ಅರಾಮಾಗಿದ್ದಾರೆ. ನಾನು ಹಾಗೂ ಮನ್ಸೂರೆ ಒಟ್ಟಿಗೆ ವೈದ್ಯರ ಬಳಿ ಮಾತನಾಡಿದ್ದೇವೆ, ಮಾಹಿತಿ ಪಡೆದಿದ್ದೇವೆ. ಆಪರೇಷನ್ ಆಗಿದೆ, ಔಟ್ ಆಫ್ ಡೇಂಜರ್ ಎಂದು ಹೇಳಿದ್ದಾರೆ. 48 ಗಂಟೆಗಳಲ್ಲಿ ಸಂಚಾರಿ ವಿಜಯ್ ಮಾತನಾಡುತ್ತಾರೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದನ್ನೂ ಓದಿ: ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?

Sanchari VIjay 2 medium

ತುಂಬಾ ಒಳ್ಳೆಯ ಸ್ನೇಹಿತ, ಒಂದು ವಾರದಿಂದ ನನ್ನ ಜೊತೆಗೇ ಇದ್ದರು, ನಿನ್ನೆ ಮಾತ್ರ ನನ್ನ ಜೊತೆಗಿರಲಿಲ್ಲ. ನಾನು, ಅವರು ಹಾಗೂ ನಮ್ಮ ತಂಡದವರು ಸೇರಿಕೊಂಡು ಫುಡ್ ಕಿಟ್ ಹಂಚುತ್ತಿದ್ದೆವು. ಅವರೂ ಸಹ ಕಳೆದ ಎರಡು ತಿಂಗಳಿಂದ ಅವರ ‘ಉಸಿರು’ ತಂಡದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಲಾಕ್‍ಡೌನ್ ವೇಳೆ ಸಹಾಯ ಮಾಡುತ್ತಿದ್ದರು, ಫುಡ್ ಕಿಟ್ ಹಂಚುತ್ತಿದ್ದರು. ಲಾಕ್‍ಡೌನ್ ಆದಾಗಿನಿಂದ ದಿನದ 24 ಗಂಟೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದರು. ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಲೆಕ್ಕವೇ ಇಲ್ಲ, ಅಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಬಳಿಕ ನಮ್ಮ ಜೊತೆಗೂ ಕೈ ಜೋಡಿಸಿದ ಎಂದು ವಿವರಿಸಿದರು.

Sanchari VIjay 1 medium

ಬಲಗಡೆ ತೊಡೆಗೆ ಏಟು ಬಿದ್ದಿದ್ದು, ಆಪರೇಷನ್ ಮಾಡಿದ್ದಾರೆ. ಅದರದ್ದೇನು ಸಮಸ್ಯೆ ಇಲ್ಲ, ಜೀವ ಭಯವಿಲ್ಲ, ಬೇಗ ಗುಣಮುಖರಾಗುತ್ತಾರೆ. ಆದರೆ ಅಪಘಾತ ಬಳಿಕ ಕೈ, ಕಾಲು ಮುರಿದಾಗ ಯಾವ ರೀತಿ ಸಮಸ್ಯೆ ಆಗುತ್ತದೋ ಅದು ಇದ್ದೇ ಇರುತ್ತೆ. ಒಳ್ಳೆಯ ವ್ಯಕ್ತಿ, ಅವರಿಗೆ ಕೆಟ್ಟದ್ದಾಗಲ್ಲ, ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಮಾಜದ ಜೊತೆ ಯಾವಾಗಲೂ ಸ್ಪಂದಿಸಿದ್ದಾನೆ, ಹೀಗಾಗಿ ಏನೂ ಆಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *