ಬೆಂಗಳೂರು: ಚಂದನವನದ ಹಿರಿಯ ಕಲಾವಿದೆ ಬಿ.ಜಯಾ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಜಯಾ ಅವರು ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಯಾ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ವಾಪಸ್ ಆಗಿದ್ದರು. 1958ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಕಾಲಿಟ್ಟ ಜಯಾ ಅವರು, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಡಾ.ರಾಜಕುಮಾರ್, ನರಸಿಂಹರಾಜು, ದ್ವಾರಕೀಶ್ ಸೇರಿದಂತೆ ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. 60ರ ದಶಕದಲ್ಲಿ ಜಯಾ ಅವರಿಗೆ ಪಾತ್ರವೊಂದು ಮೀಸಲಾಗಿರುತ್ತಿತ್ತು.
ರಂಗಭೂಮಿ ಕಲಾವಿದೆಯಾಗಿದ್ದ ಜಯಾ ಅವರು ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ವಯಸ್ಸಾದರೂ ಮನೆಯಲ್ಲಿ ಕಾಲ ಕಳೆಯದೇ ಧಾರಾವಾಹಿಗಳಲ್ಲಿಯೂ ಜಯಾ ಅವರು ನಟಿಸುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು.