ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪನವರು ಉತ್ತಮ ಖಾತೆ ನೀಡುತ್ತಿಲ್ಲ ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಬೇಸರ ಹೊರಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವನಾಗಲು ನನಗೂ ಆಸೆ ಇದೆ. ಕಳೆದ ಸರ್ಕಾರದಲ್ಲಿ ವಸತಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನಂತರ ಬಿಜೆಪಿ ಸರ್ಕಾರದಲ್ಲಿ ಒಳ್ಳೆಯ ಖಾತೆ ನೀಡುವುದಾಗಿ ನಂಬಿಕೆ ಇತ್ತು. ಆದರೆ ಮಾನ್ಯ ಮುಖ್ಯಮಂತ್ರಿಗಳು ಒಳ್ಳೆಯ ಖಾತೆ ನೀಡಲಿಲ್ಲ. ಜಿಲ್ಲೆಯ ಕಾರ್ಯಕರ್ತರು ಹೋದ ಕಡೆಯಲ್ಲೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ. ಪ್ರತಿ ಸಲ ಕೇಳಿದರೂ ಉತ್ತಮ ಖಾತೆ ನೀಡುವುದಾಗಿ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ರಾಜಕೀಯಕ್ಕೆ ಬಂದಿರುವುದು ಫ್ಯಾಶನ್ ಗೋಸ್ಕರಲ್ಲ. ಜನರ ಸೇವೆ ಮತ್ತು ಅವರ ಕಣ್ಣೀರು ಒರೆಸಲು ಬಂದಿದ್ದೇನೆ. ಸಂಪತ್ತು ಬಂದಾಗ ದಾನ ಮಾಡಿ, ಬಡತನ ಬಂದಾಗ ಧ್ಯಾನ ಮಾಡು, ಅಧಿಕಾರ ಬಂದಾಗ ಸೇವೆಯನ್ನು ಮಾಡು. ಈ ಒಂದು ಮಾನದಂಡದ ಮೇಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ. ಜನರ ತೆರಿಗೆ ಹಣದಿಂದ ಸರ್ಕಾರ ನಡೆಯುತ್ತಿದೆ. ಅವರಿಗೆ ಅವಶ್ಯಕ ಸೇವೆ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬೆಂಳೂರು ಗ್ರಾಮಾಂತರ ಹೊಸಕೋಟೆ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಶಾಲೆ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಿದರು.