ಮೈಸೂರು: ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ವೆಚ್ಚ ಮಾಡಿರುವ 38 ಕೋಟಿ ರೂಪಾಯಿಯ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮಗಳ ಮೂಲಕ ಉತ್ತರ ನೀಡಿದ್ದಾರೆ.
ತಮ್ಮ ಹೇಳಿಕೆಯಲ್ಲಿ, ಜಿಲ್ಲಾಧಿಕಾರಿಯಾಗಿ ನನ್ನ ಗಮನ ಕೊರೊನಾ ಸೋಂಕಿನ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾತ್ರ ಇರುತ್ತದೆ. ಯಾವುದೇ ವೈಯಕ್ತಿಕ ಆರೋಪಗಳತ್ತ ಗಮನ ನೀಡುವುದಿಲ್ಲ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ನಿರಂತರವಾಗಿ ವೈಯಕ್ತಿಕವಾಗಿ ಆರೋಪ, ದಾಳಿ ನಡೆಸಲಾಗುತ್ತಿದೆ. ಆದರೆ ನಾನು ಎಲ್ಲವನ್ನೂ ನಿರ್ಲಕ್ಷಿಸಿ ಸಾಂಕ್ರಾಮಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣದತ್ತ ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ.
ವೈಯಕ್ತಿಕ ದಾಳಿಗಳು ಜಿಲ್ಲಾಡಳಿತವನ್ನು ತನ್ನ ಕೆಲಸದಿಂದ ದೂರವಿರಿಸಲು ಸಾಧ್ಯವಾಗದಿದ್ದಾಗ, ಈಗ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಪ್ರಾರಂಭವಾಗಿವೆ. ಹೀಗಾಗಿ ಈ ಅಂಕಿ ಅಂಶ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ: ಪ್ರತಾಪ್ ಸಿಂಹ
ಯಾವುದಕ್ಕೆ ಎಷ್ಟು?
1. ಜಿಲ್ಲಾಸ್ಪತ್ರೆ ವೈದ್ಯಕೀಯ ಉಪಕರಣಗಳು, ಔಷಧ, ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಟೇಷನರಿ ಇತ್ಯಾದಿ: 13 ಕೋಟಿ ರೂ.
2. ಐಸೋಲೇಷನ್ ವ್ಯವಸ್ಥೆ ಮತ್ತು ಕೋವಿಡ್ ಕೇರ್ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿ: 5 ಕೋಟಿ ರೂ.
3. ಕ್ವಾರಂಟೈನ್ ಒಳಪಟ್ಟವರಿಗೆ ಹೋಟೆಲ್ ವಾಸ್ತವ್ಯ, ಅಂದಿನಿಂದ ಇಂದಿನವರೆಗೆ ರೋಗಿಗಳಿಗೆ ಊಟದ ವ್ಯವಸ್ಥೆ: 4 ಕೋಟಿ ರೂ.
4. ಮೈಸೂರು ಮೆಡಿಕಲ್ ಕಾಲೇಜಿಗೆ ಟೆಸ್ಟಿಂಗ್ ಮೆಟಿರಿಯಲ್ಸ್: 7 ಕೋಟಿ ರೂ.
5. ಸ್ವಾಬ್ ಕಲೆಕ್ಷನ್ ಮತ್ತು ಹೊರಗುತ್ತಿಗೆ ಸಿಬ್ಬಂದಿ: 1 ಕೋಟಿ ರೂ.
6. ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್ ವಾಹನ ವ್ಯವಸ್ಥೆ: 4 ಕೋಟಿ ರೂ.
7. ಆಮ್ಲಜನಕ ಪೂರೈಕೆ: 1 ಕೋಟಿ ರೂ.
8. ಇತರೆ ವೆಚ್ಚಗಳು(ದೂರವಾಣಿ, ಇಂಟರ್ನೆಟ್, ಕಂಪ್ಯೂಟರ್, ಶಾಮಿಯಾನ ಇತ್ಯಾದಿ) 1 ಕೋಟಿ ರೂ.