ಹಾವೇರಿ: ಜಿಲ್ಲೆಯಲ್ಲಿ ಲಾಕ್‍ಡೌನ್ ನಡುವೆಯೂ ಅನಗತ್ಯವಾಗಿ ಹೊರಗೆ ಓಡಾಡುವ ಬೈಕ್ ಸವಾರಿಗೆ ಬೈಕ್ ತಳ್ಳಿಕೊಂಡು ಹೋಗುವ ಶಿಕ್ಷೆ ನೀಡುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಇದ್ದರೂ ಕೂಡ ಕೆಲ ಬೈಕ್ ಸವಾರರು ಅನಗತ್ಯವಾಗಿ ರಸ್ತೆಗಿಳಿದಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುವ ಬೈಕ್ ಸವಾರರಿಗೆ ವಿಭಿನ್ನ ರೀತಿಯ ಶಿಕ್ಷೆ ನೀಡಿ ಕೊರೊನಾ ಪಾಠ ಹೇಳಿದ್ದಾರೆ. ವಿನಾಕಾರಣ ರಸ್ತೆಗಿಳಿದ ಬೈಕ್ ಸವಾರರ ಕೀ ವಶಪಡಿಸಿಕೊಂಡು ಸಿದ್ದಪ್ಪ ವೃತ್ತದಿಂದ ಸಂಚಾರಿ ಪೊಲೀಸ್ ಠಾಣೆವರೆಗೆ ಬೈಕ್ ತಳ್ಳಿಕೊಂಡು ಹೋಗುವ ಶಿಕ್ಷೆ ನೀಡಿದ್ದಾರೆ. ಇದನ್ನೂ ಓದಿ, ಗಂಟೆಗಳ ಅಂತರದಲ್ಲಿ ತಾಯಿ, ಮಗ ಇಬ್ಬರೂ ಕೊರೊನಾಗೆ ಬಲಿ
ಸವಾರರು ಬೈಕ್ ತಳ್ಳಿಕೊಂಡು ಪೊಲೀಸ್ ಠಾಣೆವರೆಗೆ ಹೋದ ಬಳಿಕ ದಂಡ ಕಟ್ಟಿಸಿಕೊಂಡು ಹೊರಗೆ ಓಡಾಡದಂತೆ ತಾಕೀತು ಮಾಡಿ ಮನೆಗೆ ಕಳುಹಿಸಿಕೊಡುತ್ತಿದ್ದಾರೆ. ಸಂಚಾರಿ ಠಾಣೆ ಪಿ.ಎಸ್.ಐ ಬಸವರಾಜ್ ಬೆಟಗೇರಿ ನೇತೃತ್ವದಲ್ಲಿ ಪೊಲೀಸರಿಂದ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.