– ಸಿ.ಪಿ ಯೋಗೇಶ್ವರ್ ವಿರುದ್ಧ ಶಾಸಕ ತಿರುಗೇಟು
ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಮತ್ತೆ ಸಿ.ಪಿ ಯೋಗೇಶ್ವರ್ ವಿರುದ್ಧ ಸುರಪುರ ಶಾಸಕ ರಾಜು ಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜು ಗೌಡ, ಸಿಎಂ ಮೇಲೆ ಹಾಗೂ ರಾಜ್ಯದ ಜನರ ಮೇಲೆ ಯಾರು ವಿಶ್ವಾಸ ಇಟ್ಟು ಕೆಲಸ ಮಾಡುತ್ತಾರೆ ಅಂತವರನ್ನು ಸಂಪುಟದಲ್ಲಿ ಮುಂದುವರೆಸಬೇಕು. ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ ಎಂದು ಮತ್ತೆ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ. ಕಳ್ಳ, 420 ಯೋಗೇಶ್ವರ್‌ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ
ರಾಜು ಗೌಡರ ಹಿಂದೆ ಒಂದು ಶಕ್ತಿ ಇದೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ತಿರುಗೇಟು ನೀಡಿದ ಶಾಸಕರು, ನನ್ನ ಹಿಂದೆ ಸುರಪುರ ಜನತೆ ಶಕ್ತಿ ಇದೆ, ಮತಬಾಂಧವರ ಶಕ್ತಿ ಇದೆ. ಈ ಧೈರ್ಯದ ಮೇಲೆ ಮಾತನಾಡುತ್ತೇನೆ. ಅಲ್ಲದೇ ನಾನು ಒಳ್ಳೆ ಕೆಲಸ ಮಾಡುತ್ತೇನೆ. ನನಗೆ ಬಕೆಟ್ ಹಿಡಿಯೋಕೆ ಬರುವುದಿಲ್ಲ. ಬಕೆಟ್ ಹಿಡಿಯುವ ಮನುಷ್ಯ ಆದ್ರೆ ಮಾತನಾಡುವುದಕ್ಕೆ ಧೈರ್ಯ ಬರೋದಿಲ್ಲ ಎಂದರು.
ಯೋಗೇಶ್ವರ್ ವಿರುದ್ಧ ಮೊದಲು ಮಾತಾಡಿದ್ದೇನೆ. ಈಗಲೂ ಮಾತಾಡುತ್ತೇನೆ. ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದರೆ ಶಹಬ್ಬಾಶ್ ಗಿರಿ ಕೊಡುತ್ತೇವೆ. ಈ ರೀತಿ ಕೆಟ್ಟ ಕೆಲಸ ಮಾಡಿದರೆ ತಕ್ಕ ಉತ್ತರ ಕೊಡುವ ಶಕ್ತಿ ಸುರಪುರ ಮತ ಕ್ಷೇತ್ರದ ಜನತೆ ಕೊಟ್ಟಿದೆ, ಹಾಗಾಗಿ ಮಾತನಾಡುತ್ತಿದ್ದೇನೆ. ಸುರಪುರ ಜನರು ಕೈ ಹಿಡಿದರೆ ರಾಜು ಗೌಡ ಶಾಸಕರಾಗ್ತಾರೆ. ಬೇರೆ ಯಾರೋ ಯೋಗೇಶ್ವರ್ ಮಾತು ಕೇಳಿ ಶಾಸಕ ಆಗಲ್ಲ ಎಂದರು.