ಬೆಂಗಳೂರು: ಕೊರೊನಾ ಮಹಾಮಾರಿ ಅಬ್ಬರದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಯೋಗೇಶ್ವರ್ ತಿರುಗಿಬಿದ್ದಿದ್ದಾರೆ.
ಎಂಎಲ್‍ಸಿ ಆಗಿದ್ದ ತನ್ನನ್ನು ಸಚಿವ ಮಾಡಿದ ಬಿಎಸ್‍ವೈ ವಿರುದ್ಧ ಸಿಪಿವೈ ಸಿಟ್ಟು ಹೊರಹಾಕಿದ್ದಾರೆ. ಈ ಮೂಲಕ ಆಪರೇಷನ್ ಕಮಲ ರೂವಾರಿ ಈಗ ಬಿಎಸ್‍ವೈ ಇದೀಗ ಶತ್ರುವಾಗಿ ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ರಾಜಕೀಯ ಅಸ್ತಿತ್ವವನ್ನೇ ಸಿಎಂ ಅಲುಗಾಡಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.
ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಸಚಿವ ಯೋಗೇಶ್ವರ್ ಸಿಟ್ಟಿಗೆ ರಾಮನಗರ ರಾಜಕಾರಣ ಕಾರಣವಂತೆ. ರಾಮನಗರದಲ್ಲಿ ಯೋಗೇಶ್ವರ್‍ಗೆ ಕಾಂಗ್ರೆಸ್, ಜೆಡಿಎಸ್ ನಾಯಕರೇ ಎದುರಾಳಿಗಳು. ಹೀಗಾಗಿ ಕಾಂಗ್ರೆಸ್, ಜೆಡಿಎಸ್‍ನ ಆ ಇಬ್ಬರು ನಾಯಕರ ತಂಟೆಗೆ ಹೋಗದಂತೆ ಯೋಗೇಶ್ವರ್‍ಗೆ ಸಿಎಂ ಸ್ಪಷ್ಟವಾಗಿ ಸೂಚಿಸಿದ್ದರಂತೆ. ಯಡಿಯೂರಪ್ಪ ಅವರ ಈ ಫರ್ಮಾನ್‍ಗೆ ಯೋಗೇಶ್ವರ್ ಸಿಟ್ಟಾಗಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಾನು ಹೆಸರಿಗಷ್ಟೇ ಸಚಿವ. ಆದರೆ ಕಾಂಗ್ರೆಸ್, ಜೆಡಿಎಸ್ ನಾಯಕರ ಇರಾದೆಯಂತೆ ಜಿಲ್ಲೆಯಲ್ಲಿ ಆಡಳಿತ ನಡೆಸಬೇಕು. ಆ ಇಬ್ಬರು ನಾಯಕರ ಬಗ್ಗೆಯೂ ಸಿಎಂ ಯಡಿಯೂರಪ್ಪ ಮೃಧು ಧೋರಣೆ ತೋರಿದ್ದಾರೆ. ಇದರಿಂದ ನನ್ನ ಜಿಲ್ಲೆಯಲ್ಲೇ ನನ್ನ ಹಿಡಿತ ತಪ್ಪುತ್ತೆ. ಸರಿಪಡಿಸುವಂತೆ ಸಿಎಂಗೆ ಮನವಿ ಮಾಡಿದ್ರೆ ಬೇರೆ ಕ್ಷೇತ್ರಗಳು ಇವೆ ಅಂತಾರೆ. ನನ್ನ ಜಿಲ್ಲೆ, ನನ್ನ ಕ್ಷೇತ್ರದಲ್ಲೇ ಹಿಡಿತ ಕೈ ತಪ್ಪಿದ್ರೆ ಹೇಗೆ..?, ನನಗಿಂತ ಕಾಂಗ್ರೆಸ್, ಜೆಡಿಎಸ್‍ನ ಆ ನಾಯಕರೇ ಬಿಎಸ್‍ವೈ ಹೆಚ್ಚಾದ್ರಾ ಎಂಬ ಸಿಟ್ಟು ಯೋಗೇಶ್ವರಿಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.