– ಮನೆ ಮನೆಯಲ್ಲಿ ನಿಲ್ಲುತ್ತಿಲ್ಲ ಸರಣಿ ಸಾವು
ಬೆಂಗಳೂರು: ಕೊರೊನಾ ಆರ್ಭಟ ನಿಲ್ಲೋ ಲಕ್ಷಣ ಮುಗಿಯುತ್ತಿಲ್ಲ. ಈ ಮಧ್ಯೆ ಮನಲಕುವ ಘಟನೆಗಳು ಒಂದಿಷ್ಟು ಬದುಕನ್ನು ತಲ್ಲಣಿಸುತ್ತಿರೋದಂತೂ ಸತ್ಯ.
ಕೊರೊನಾದಿಂದ ಬದುಕೇ ನರಕ ಆಗಿಬಿಟ್ಟಿದೆ. ಎಲ್ಲಿ ನೋಡಿದ್ರೂ ಸಾವು, ಪರದಾಟ, ನರಳಾಟದ ಸುದ್ದಿಗಳೇ ಕಣ್ಣಿಗೆ ರಾಚುತ್ತೆ. ಅವರು ಸತ್ತರು, ಇವರು ಕೊನೆಯುಸಿರೆಳೆದ್ರು. ಹೀಗೆ ಬೆಳಗ್ಗೆ ಎದ್ದಾಗಿನಿಂದ ಮಲಗೋವರೆಗೂ ಈ ಕೊರೊನಾ ಕಥೆಗಳು ಕಣ್ಣೀರು ತರಿಸುತ್ತೆ. ಇನ್ನು ಕೆಲವು ಆಕ್ರೋಶ ಹುಟ್ಟಿಸುತ್ತೆ. ಮತ್ತೊಂದಷ್ಟು ಕಥೆಗಳು ಜನರ ಮಾನವೀಯ ಮುಖಗಳನ್ನು ಪರಿಚಯಿಸುತ್ತೆ. ನಿನ್ನೆ ಕೂಡ ರಾಜ್ಯದ ಹಲವೆಡೆ ಕೊರೋನಾ ಜನಕ-ಕರುಣಾಜನಕ ಕಥೆಗಳು ಘಟಿಸಿದೆ.
ಒಂದೇ ವಾರದಲ್ಲಿ ತಾಯಿ-ಮಗ ಕೊರೊನಾಗೆ ಬಲಿ..!
ಇದು ಶಿವಮೊಗ್ಗದ ಕರುಣಾಜನಕ ಕಥೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪೂಜಾರುದಿಂಬ ಗ್ರಾಮದಲ್ಲಿ ಒಂದೇ ವಾರದ ಅಂತರದಲ್ಲಿ ಕೊರೋನಾಗೆ ಅಮ್ಮ, ಮಗ ಸಾವನ್ನಪ್ಪಿದ್ದಾರೆ. ಕಳೆದ ವಾರ 86 ವರ್ಷದ ತಾಯಿ ರತ್ನಮ್ಮ ಸಾವನ್ನಪ್ಪಿದ್ರೆ, ಈಗ 46 ವರ್ಷದ ಮಗ ಯುವರಾಜ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೇ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ಆವರಿಸಿದೆ. ಈಗ ಮುಂಜಾಗ್ರತಾ ಕ್ರಮವಾಗಿ ಪೂಜಾರುದಿಂಬ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ಕಷ್ಟಪಟ್ಟು ಹೆಂಡತಿಯನ್ನ ತಹಶೀಲ್ದಾರ್ ರಾಗಿ ಮಾಡಿಸಿದ್ದ ಪತಿ ಬಲಿ:
ಶಿವಮೊಗ್ಗದ ಕರುಣಾಜನಕ ಕಥೆ. ಇವರ ಹೆಸರು ಸೀನಾ. ಇವರು ತನ್ನ ಅಕ್ಕಮಗಳನ್ನು ಮದುವೆ ಆಗಿದ್ರು. ವಿವಾಹವಾದರೂ ಪತ್ನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಅಲ್ಲದೇ ಸೀನಾ ತಾನಂತು ಓದಿಲ್ಲ ತನ್ನ ಹೆಂಡತಿಯಾದರೂ ಓದಿ ಅಧಿಕಾರಿಯಾಗಲಿ ಎಂಬ ಕನಸು ಕಂಡಿದ್ದರು. ನಂತರ ಪತ್ನಿ ಕೆಎಎಸ್ ಓದಿ ಬೆಂಗಳೂರಿನಲ್ಲಿ ತಹಶೀಲ್ದಾರ್ ಕೂಡ ಆಗಿ ಕಾರ್ಯನಿರ್ವಹಿಸ್ತಿದ್ರು. ತನ್ನ ಆಸೆಯನ್ನು ಈಡೇರಿಸಿದ ಪತ್ನಿಯ ಜೊತೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದರು. ಆದರೆ ಕೊರೋನಾ ಬರಸಿಡಿಲಿನಂತೆ ಅಪ್ಪಳಿಸಿ ಈಗ ಗಂಡನನ್ನೇ ಬಲಿ ತೆಗೆದುಕೊಂಡಿದೆ.
ಶಾಸಕರ ಅಮಾನವೀಯತೆ..!
ಕೊರೊನಾದ ಇಂತಹ ಸಮಯದಲ್ಲಿ ಜನರೇ ಮಾನವೀಯತೆ ಮೆರೆಯುತ್ತಿದ್ದರೂ ಇಲ್ಲೊಬ್ಬ ಶಾಸಕರೇ ಮಾನವೀಯತೆ ಮರೆತು ವರ್ತಿಸಿದ್ದಾರೆ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಡ್ಯೂಟಿ ಮುಗಿಸಿಕೊಂಡು ಬರುವಾಗ ಅಪಘಾತವಾಗಿ ಬಿದ್ದು ನರಳಾಡುತ್ತಿದ್ದರು. ಅದೇ ಸಮಯದಲ್ಲಿ ಬಂದ ತರೀಕೆರೆ ಬಿಜೆಪಿ ಶಾಸಕ ಸುರೇಶ್ ಸೌಜನ್ಯಕ್ಕೂ ಹೋಗಿ ನರಳಾಡ್ತಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿಲ್ಲ. ಸುಮಾರು 20 ನಿಮಿಷಗಳ ಬಳಿಕ ಅಂಬುಲೆನ್ಸ್ ಬಂದು ಗಾಯಾಳುವನ್ನ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಗೆ ತಲುಪುತ್ತಿದ್ದಂತೆ ರಮೇಶ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುರೇಶ್ ಗೌಡ, ತನಗೆ ಕಣ್ಣು ನೋವಿತ್ತು ಎಂದಿದ್ದಾರೆ.
ಈ ಕೊರೊನಾದಿಂದ ನಾನ್ ಕೋವಿಡ್ ರೋಗಿಗೂ ಬೆಡ್ ಸಿಗುತ್ತಿಲ್ಲ. ಬೆಂಗಳೂರಲ್ಲಿ ಬೆಡ್ಗಾಗಿ ಮಾಜಿ ಯೋಧರೊಬ್ಬರು ಪರದಾಡಿ ಸಾವನ್ನಪ್ಪಿದ್ದಾರೆ. ಆಕ್ಸಿಡೆಂಟ್ ಆಗಿ ಗಂಭೀರ ಸ್ಥಿತಿಯಲ್ಲಿ ಬೆಡ್ಗಾಗಿ ಮಾಜಿ ಯೋಧ ಅಲೆದಾಡಿದ್ದಾರೆ. ಆದರೆ ಎಲ್ಲಾ ಕಡೆ ಐಸಿಯು ಬೆಡ್ ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಎಂದು ಉತ್ತರ ಬಂದಿದೆ. ಹಾಗಾಗಿ ಬೆಡ್ ಸಿಗದೇ ಕೊನೆಯುಸಿರೆಳೆದಿದ್ದು ಯೋಧನ ಆಪ್ತ ಕಣ್ಣೀರು ಹಾಕಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದ ಮಾನವೀಯ ಮೌಲ್ಯಗಳೇ ಮರೆಯಾಗುತ್ತಿದೆ. ಮತ್ತೊಂದೆಡೆ ಜೀವ ಜೀವಗಳನ್ನೇ ಕಸಿದು ಅನಾಥರನ್ನಾಗಿಸುತ್ತಿದೆ.