– ಬಿಎಸ್‍ವೈ ಮಾತ್ರ ಮೂಲ ಬಿಜೆಪಿ ನಾಯಕ
ಕೊಪ್ಪಳ: ಸಚಿವ ಸಿ.ಪಿ.ಯೋಗೇಶ್ವರ್ ಗೆ ಈಗ ಜ್ಞಾನೋದಯವಾದಂತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಯಡಿಯೂರಪ್ಪರನ್ನು ಸಿಎಂ ಮಾಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗುವಾಗ ಯೋಗೇಶ್ವರ್ ಅವರಿಗೆ ಗೊತ್ತಾಗಲಿಲ್ಲವೇ? ಈಗ ಜ್ಞಾನದೋಯವಾದಂತಿದೆ. ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರವಿದೆ ಎಂದು ಯೋಗೇಶ್ವರ್ ಈಗ ಹೇಳುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿ ಸರ್ಕಾರ ಮಾಡುವಾಗ ಗೊತ್ತಾಗಲಿಲ್ಲವಾ? ಆಗ ರಾಜ್ಯದ ಅಭಿವೃದ್ಧಿಗಾಗಿ ಶಾಸಕರನ್ನ ಕರೆದುಕೊಂಡು ಹೋದಿರೋ ಅಥವಾ ಕೊಳ್ಳೆ ಹೊಡೆಯಲು ಹೋದಿರೋ ಎಂದು ರಾಜ್ಯದ ಜನರು ನಿಮ್ಮನ್ನು ಕೇಳಬೇಕಾಗಿದೆ ಎಂದರು. ಇದನ್ನೂ ಓದಿ: ನಿಮ್ಮ ಸ್ವಾರ್ಥದ ಬಣ ಕಿತ್ತಾಟಕ್ಕೆ ಕಾಂಗ್ರೆಸ್ ಹೆಸ್ರು ಬಳಸಬೇಡಿ: ಸಿಪಿವೈ ಹೇಳಿಕೆಗೆ ತಿರುಗೇಟು
ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹಣ ಕೊಟ್ಟು ಕರೆದುಕೊಂಡು ಹೋಗಿದ್ದೀರಿ ಎಂದು ಆರೋಪಿಸಿದರು. ಈ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಯಡಿಯೂರಪ್ಪ ಹಾಗೂ ವಿಜಯೇಂದ್ರರ ಸರ್ಕಾರ ಎಂದು ಹೇಳಿದ್ದರು. ಬಿಜೆಪಿ ಹೈಕಮಾಂಡ್ ತಮ್ಮ ಶಾಸಕರನ್ನು ಹತೋಟಿಯಲ್ಲಿಡಬೇಕು. ಇಲ್ಲವೇ ಯಡಿಯೂರಪ್ಪ ಅವರನ್ನ ಬದಲಾಯಿಸಬೇಕು. ಬಿಜೆಪಿಯಲ್ಲಿ ಯಾರು ಒರಿಜನಲ್ ಇದ್ದಾರೆ? ಎಲ್ಲರೂ ಬೇರೆ ಬೇರೆ ಪಕ್ಷದಿಂದ ಬಂದವರು. ಯಡಿಯೂರಪ್ಪ ಮಾತ್ರ ಮೂಲ ಬಿಜೆಪಿಯವರು ಎಂದು ಶಿವರಾಜ್ ತಂಗಡಗಿ ಹೇಳಿದರು. ಇದನ್ನೂ ಓದಿ: 65 ಶಾಸಕರ ಸಹಿ ಪತ್ರ ನನ್ನಲ್ಲಿದೆ, ಅಖಾಡಕ್ಕೆ ಬಾ: ಸಿಪಿವೈಗೆ ರೇಣುಕಾಚಾರ್ಯ ಪಂಥಾಹ್ವಾನ