ಬಾಗಲಕೋಟೆ: ಒಂಬತ್ತು ದಿನದ, ಆರು ತಿಂಗಳು ಕಂದಮ್ಮ ಸೇರಿದಂತೆ ಮೂರು ನವಜಾತು ಶಿಶುಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆ ಮಾಹಿತಿ ನೀಡಿದೆ. ನವಜಾತ ಶಿಶುಗಳ ಜೊತೆ ಐವರು ಮಕ್ಕಳು ಸಹ ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಂಬತ್ತು ದಿನಗಳ ನವಜಾತ ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಎಚ್‍ಎಫ್‍ಎನ್‍ಸಿ ಬೆಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಶಿಶು ಆರೋಗ್ಯವಾಗಿದೆ. ಈ ಶಿಶು ವಿಜಯಪುರ ಜಿಲ್ಲೆಯ ಕೊಲ್ಹಾರ ಪ್ರಾಥಮಿಕ ಆಸ್ಪತ್ರೆಯಲ್ಲಿ ಜನಿಸಿತ್ತು, ನಂತರ ಉಸಿರಾಟದ ತೊಂದರೆಯಾದಾಗ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಶಿಶು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದೆ.
ಇನ್ನೊಂದು ಕೊಪ್ಪಳ ಜಿಲ್ಲೆ ಕುಷ್ಟಗಿ ಮೂಲದ ಆರು ತಿಂಗಳ ಕೂಸು ಕೂಡ ಕೋವಿಡ್ ನಿಂದ ಬಳಲುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹಾಗೆಯೇ ಆಸ್ಪತ್ರೆಯಲ್ಲಿ ಇನ್ನುಳಿದ ಮಕ್ಕಳು ಹಾಗೂ ನವಜಾತ ಶಿಶುಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಎಂಟು ಪ್ರಕರಣಗಳಲ್ಲಿ ತಾಯಂದಿರಿಂದ ಮಕ್ಕಳಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಕುಮಾರೇಶ್ವರ ಆಸ್ಪತ್ರೆ ಮಾಹಿತಿ ನೀಡಿದೆ.