– ಸಂಭ್ರಮದ ಮನೆಯಲ್ಲಿ ಆವರಿಸಿದ ಸೂತಕ
ಲಕ್ನೋ: ಹಾರ ಬದಲಿಸಿಕೊಂಡ ಕೆಲವೇ ಗಂಟೆಯಲ್ಲಿ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಟವಾದ ಸಮಸಪುರದಲ್ಲಿ ನಡೆದಿದೆ.
ಸುರಭಿ ಮೃತ ವಧು. ಮೇ 25ರಂದು ಸುರಭಿ ಮದುವೆ ಪಕ್ಕದೂರಿನ ಮಂಜೇಶ್ ಜೊತೆ ನಿಶ್ಚಯವಾಗಿತ್ತು. ಮೇ 25ರ ಸಂಜೆ ವರ ಸೇರಿದಂತೆ ಆತನ ಕುಟುಂಬಸ್ಥರು ವಧು ನಿವಾಸಕ್ಕೆ ಆಗಮಸಿದ್ದರು. ಸಂಜೆ ಜೋಡಿ ಹಾರ ಬದಲಿಸಿಕೊಂಡು ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದರು. ಇದಾದ ಬಳಿಕ ಸಿಂಧೂರ ಹಚ್ಚುವುದು ಸೇರಿದಂತೆ ರೀತಿ ರಿವಾಜುಗಳನ್ನು ಪೂರೈಸಲಾಗುತ್ತಿತ್ತು. ಇನ್ನೇನು ಅಗ್ನಿಕುಂಡಕ್ಕೆ ಏಳು ಸುತ್ತು ಹಾಕೋದು ಬಾಕಿ ಇತ್ತು.
ರಾತ್ರಿ ಸುಮಾರು ಎರಡೂವರೆ ಗಂಟೆಗೆ ಸುರಭಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಪೋಷಕರು ಸಮೀಪದ ವೈದ್ಯರನ್ನ ಕರೆಸಿ ತಪಾಸಣೆ ನಡೆಸಿದ್ದಾರೆ. ಹೃದಯಾಘಾತದಿಂದ ವಧು ಸಾವನ್ನಪ್ಪಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಇತ್ತ ವಧು ಸಾವನ್ನಪ್ಪುತ್ತಿದ್ದಂತೆ ಕುಟುಂಬಸ್ಥರು ಮಂಜೇಶ್ ಗೆ ಸುರಭಿ ಸೋದರಿಯ ಜೊತೆ ಮದುವೆ ಮಾಡಿಸಿದ್ದಾರೆ. ಸರಳವಾಗಿ ಮದುವೆ ಮಾಡಿ ಬಿದಾಯಿ ನಂತ್ರ ಅಂತ್ಯಸಂಸ್ಕಾರ ನರೆವೇರಿಸಿದ್ದಾರೆ.