“ಗ್ರಾಮಗಳಲ್ಲಿ ಮನೆ ಮನೆ ತಪಾಸಣೆ ನಡೆಸಿ ಲಕ್ಷಣವುಳ್ಳವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿ”

Public TV
1 Min Read
Nehru Olekar

ಹಾವೇರಿ: ಹಾವೇರಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕೋವಿಡ್-19 ಸೋಂಕಿನ ಕುರಿತು ಸಮೀಕ್ಷೆ ನಡೆಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಸೂಚನೆ ನೀಡಿದರು.

ನಗರದ ತಾಲೂಕು ಪಂಚಾಂಯತ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮವಾರು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದರು. ಮನೆ ಮನೆಯ ತಪಾಸಣೆಯ ಸಂದರ್ಭದಲ್ಲಿ ಲಕ್ಷಣ ರಹಿತರಿಗೆ ಸೌಮ್ಯ ರೋಗದ ಲಕ್ಷಣ ಕಂಡುಬಂದರೂ ಗೃಹ ಪ್ರತ್ಯೇಕತೆಯಲ್ಲಿ ಇರಿಸದೇ ಕಡ್ಡಾಯವಾಗಿ ಹತ್ತಿರದ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವ ಕುರಿತಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಪಾಸಿಟಿವ್ ಪತ್ತೆಯಾದವರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ತ್ವರಿತ ಪರೀಕ್ಷೆ ಮಾಡಬೇಕು. ಸಂಪರ್ಕಿತರ ಬೀದಿಯಲ್ಲಿ ಪ್ರತಿ ಮನೆಯಲ್ಲೂ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು. ಸೋಂಕಿತ ಮೃತಪಟ್ಟಲ್ಲಿ ಅಥವಾ ಸೋಂಕು ದೃಢವಾದಲ್ಲಿ ಸೋಂಕಿನ ಮೂಲವನ್ನು ಕಂಡುಹಿಡಿದು ಆ ಸೋಂಕಿನ ಸರಪಳಿಯನ್ನು ಕತ್ತರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಮನಬಂದಂತೆ ಓಡಾಡುತ್ತಿದ್ದಾರೆ. ಇದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಬೇಕಾಬಿಟ್ಟಿ ಓಡಾಡುವವರಿಗೆ ದಂಡವಿಧಿಸಿ. ಅಗತ್ಯಬಿದ್ದರೆ ಪೋಲೀಸ್ ಅಧಿಕಾರಿಗಳಿಗೆ ನಿಯಮ ಉಲ್ಲಂಘಿಸಿವದರ ಹೆಸರು ನೀಡಿ. ಇಂತವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ್ ಕುಂದೂರ, ಪೌರಾಯುಕ್ತ ಚಲವಾದಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *