`ಆಮ್ಲಜನಕ’ ಸರ್ಕಾರವೇ ಸುಳ್ಳಿನ ಮಂಟಪದಿಂದ ಕೆಳಗಿಳಿಸಿ ನಡೆಸೆನ್ನನು..!

Public TV
5 Min Read
bsy meeting e1619696443842

ರವೀಶ್ ಎಚ್.ಎಸ್
ಏರಿಳಿತದ ಧ್ವನಿಯಲ್ಲಿ ಕೂಗಿ, ಹಾವಭಾವಗಳ ಆಕರ್ಷಣೆ ತೋರಿ, ನನ್ನನ್ನು ನಂಬಿ.. ನಂಬಿ.. ಎಂದು ಭಾಷಣ ಮಾಡುವ ಸಮಯವೂ ಅಲ್ಲ. ಭರವಸೆಗಳ ಗಿಡ ನೆಟ್ಟು ಕನಸಿನ ಹೂ ಅರಳಿಸುವ ಕಾಲವೂ ಅಲ್ಲ. ಸದ್ಯ ನೀರಿನ ಮೇಲಿನ ಗುಳ್ಳೆಯಂತಾಗಿರುವ ಜೀವಕ್ಕೆ ಆಸರೆಯಾಗಬೇಕಿದ್ದು ಆಮ್ಲಜನಕವೇ ಹೊರತು ಅತಿಯಾದ ಆಶ್ವಾಸನೆಯಲ್ಲ. ದೇಶದ ವಿಚಾರ ಬಿಡಿ. ರಾಜ್ಯವನ್ನೇ ತೆಗೆದುಕೊಳ್ಳೋಣ. ಕೊರೊನಾ ಎಂಬ ಮಾರಿ ಊರ ಬಾಗಿಲು ದಾಟಿ ಮನೆಬಾಗಿಲು ಸೇರಿ ವರ್ಷವೇ ಕಳೆದುಹೋಗಿದೆ. ಇಂತಹ ಮಾರಿಯ ಬಗ್ಗೆ ಎಚ್ಚರವಿರಬೇಕಿದ್ದ ರಾಜ್ಯ ಸರ್ಕಾರ ಮಾಡಿದ ಮೊದಲ ಮಹಾ ಎಡವಟ್ಟೇ ವಿಳಂಬ. ಸರ್ಕಾರದ ವಿಳಂಬ ನೀತಿ, ಅತಿಯಾದ ಬುದ್ಧಿವಂತಿಕೆಯಿಂದ ರಾಜ್ಯದ ಜನ ಕೊರೊನಾ ಕಠೋರತೆಯಲ್ಲಿ ಸಿಲುಕಿ ನರಳುವಂತಾಯಿತು ಎನ್ನುವ ಸತ್ಯವನ್ನ ಮಾತ್ರ ಯಾರೂ ಒಪ್ಪದೇ ಇರಲಾರರು.

RAVEESH HOLEYA SULI

ನಮಗೂ ಗೊತ್ತಿದೆ.. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಸರ್ಕಾರ ಇದ್ದರೂ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಅನ್ನೋ ಅರಿವೂ ಇದೆ. ಒಂದು ವರ್ಷಗಳ ಕಾಲ ಕೊರೊನಾ ವಿಷ ವರ್ತುಲದಲ್ಲಿ ಸಿಲುಕಿದ ನಮಗೆ ಅನುಭವ ಇತ್ತು. ಆ ಅನುಭವಕ್ಕೆ ತಕ್ಕಂತೆ ಸಿದ್ಧತೆ ಕೂಡ ನಡೆಯಬೇಕಿತ್ತು. ತಜ್ಞರ ಸಲಹೆಗಳನ್ನ ನಿರ್ಲಕ್ಷಿಸದೇ ಜಾರಿಗೆ ತರುವ ಪ್ರಯತ್ನವನ್ನೂ ಮಾಡಬೇಕಿತ್ತು. ಎರಡನೇ ಅಲೆಗೆ ಕನಿಷ್ಠ ಸಿದ್ಧತೆಯನ್ನು ಮಾಡಿಕೊಂಡಿದ್ದರೆ ಆಕ್ಸಿಜನ್ ಕೊರತೆ, ರೆಮಿಡಿಸಿವರ್ ಕೊರತೆ, ಬೆಡ್‍ಗಳ ಸಮಸ್ಯೆ ಏಕಾಏಕಿ ಉಂಟಾಗುತ್ತಿರಲಿಲ್ಲ. ಈ ಲೋಪಗಳನ್ನ ಎತ್ತಿ ಹಿಡಿದವರನ್ನೇ ವಿರೋಧಿಗಳು ಎಂದು ಬಿಂಬಿಸಿಸಲು ಸಮಯ ವ್ಯಯಿಸಿದರೇ ವಿನಃ ಸುಧಾರಣೆಗೆ ಹೆಚ್ಚು ಒತ್ತು ನೀಡುವಲ್ಲಿ ವಿಳಂಬ ಮಾಡಿದ್ದನ್ನು ಒಪ್ಪಿಕೊಳ್ಳಬೇಕಲ್ಲವಾ ಸರ್ಕಾರ?

CM BSY Meeting 2

ಕೊರೊನಾ ಕಾಲದಲ್ಲಿ ರಾಜಕೀಯ ಮಾಡಬಾರದು ಎನ್ನುವವರು ತಮ್ಮದೇ ಸರ್ಕಾರದಲ್ಲಿ ಒಳರಾಜಕೀಯ ಎದ್ದೆದ್ದು ಕುಣಿಯುತ್ತಿತ್ತು. ಒಬ್ಬ ಆರೋಗ್ಯ ಸಚಿವನನ್ನೇ ಮೈದಾನಕ್ಕೆ ಬಿಟ್ಟು ಉಳಿದ ಸಚಿವರು ಪರದೆಯ ಹಿಂದೆ ಕೇಕೆ ಹಾಕುತ್ತಿದ್ದರು. ಆರೋಗ್ಯ ಸಚಿವ ಒಳ ರಾಜಕಾರಣ ಅರಿತರೂ ಗರ್ವದಲ್ಲಿ ತೇಲಿ ಓನ್ ಮ್ಯಾನ್ ಷೋ ಮಾಡಲು ಹೋದರು. ಸರ್ಕಾರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಗೊತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಕಿವಿ ತೆರೆಯದೇ ಕಣ್ಣು ಮುಚ್ಚಿ ಕುಳಿತು ಬಿಟ್ಟರು. ಇದರ ಪರಿಣಾಮ ರಾಜ್ಯ ಸರ್ಕಾರ ಸಿದ್ಧತೆಯಲ್ಲಿ ಹಿಂದೆ ಬಿದ್ದಿತ್ತು. ಇದ್ದಕ್ಕಿದ್ದಂತೆ ಆರೋಗ್ಯ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು. ಇವರ ಒಳರಾಜಕಾರಣದ ತೆವಲಿಗೆ ಜನರು ಆಸ್ಪತ್ರೆಯ ಕಾರಿಡಾರ್‍ಗಳಲ್ಲಿ ತೆವಳುವಂತಾಯಿತು. ಅಯ್ಯೋ ಆಮ್ಲಜನಕ ಕೊಡಿ ನಾನು ಬದುಕಬೇಕು ಅಂತಾ ಜನ ಗೋಳಾಡುವಂತಾಯಿತು.

ನಿಮಗೆ ಗೊತ್ತಿರಲಿ, ಒಂದು ವರ್ಷದಲ್ಲಿ ಆಗಿದ್ದ ಕೊರೊನಾ ಸಂಖ್ಯೆ ಒಂದು ತಿಂಗಳಲ್ಲೇ ಆಗಿ ಹೋಗಿದೆ. ಸಾವುಗಳ ಸಂಖ್ಯೆಯನ್ನು ಒಂದು ತಿಂಗಳಲ್ಲಿ ಮುಕ್ಕಾಲು ವರ್ಷದ ಸಾವಿಗೆ ಸಮ ಎಂಬಂತೆ ವರದಿ ಆಗಿವೆ. ಮಾರ್ಚ್ 2020ರಿಂದ ಏಪ್ರಿಲ್ 2021ರ ತನಕ ಸೋಂಕಿನ ಪ್ರಮಾಣ 11,76,850 ಇದ್ದರೆ, ಸಾವಿನ ಸಂಖ್ಯೆ 13,497 ಇತ್ತು. ಆದರೆ ಕಳೆದ 30-35 ದಿನಗಳಲ್ಲಿ ಸೋಂಕಿನ 11 ಲಕ್ಷದ 30 ಸಾವಿರ ತಲುಪಿದ್ರೆ, ಸಾವಿನ ಪ್ರಮಾಣ 9,800 ಕ್ರಾಸ್ ಆಗಿದೆ. ಕಳೆದ 35 ದಿನಗಳಿಂದ ಸರಾಸರಿ ಪ್ರಮಾಣ ತೆಗೆದುಕೊಂಡರೆ 37ರಿಂದ 38 ಸಾವಿರ ಕೇಸ್ ಪತ್ತೆಯಾಗಿವೆ. ಇದನ್ನು ನಿರ್ಲಕ್ಷ್ಯ, ಸರ್ಕಾರದ ಉಡಾಫೆ, ಸಿದ್ಧತೆ ಇಲ್ಲದೆ ಆದ ದೊಡ್ಡ ಪ್ರಮಾದ ಅಂತಾ ಕರೆಯದೇ ಏನೆಂದು ಹೇಳಬೇಕು. ಲಾಕ್‍ಡೌನ್ ಮಾಡುವಲ್ಲಿ ವಿಳಂಬ, ಬೆಡ್ ವ್ಯವಸ್ಥೆ ಮಾಡುವಲ್ಲಿ ವಿಳಂಬ, ಔಷಧೋಪಚರ ವ್ಯವಸ್ಥೆ ಸರಿಪಡಿಸುವಲ್ಲಿ ವಿಳಂಬ. ಇದು ಸಾಲದು ಎಂಬಂತೆ ಒಳ ರಾಜಕಾರಣದ ಗುರಾಣಿ ಹಿಡಿದು ಅವರನ್ನ ಬಿಟ್ಟು ಇವರ್ಯಾರು.. ಇವರನ್ನ ಬಿಟ್ಟು ಅವರ್ಯಾರು ಎಂಬಂತೆ ಕಣ್ಣಮುಚ್ಚಾಲೆ ಆಟ ಆಡಿದ್ದು ರಾಜ್ಯ ಸರ್ಕಾರ ಅಲ್ಲವಾ..? ಇದೆಲ್ಲವನ್ನೂ ಸಹಿಸಿಕೊಂಡು ಜನರು, ಮಾಧ್ಯಮಗಳು ಸುಮ್ಮನಿರಬೇಕಿತ್ತಾ..?

cm bsy meeting

ಎರಡನೇ ಅಲೆಯ ಬಗ್ಗೆ ತಜ್ಞರು ಒಂದೂವರೆ ತಿಂಗಳ ಮುಂಚೆಯೇ ಎಚ್ಚರಿಸಿದ್ದರು. ಆಗ ತಕ್ಷಣ ಸರ್ಕಾರ ಮೈಕೊಡವಿ ನಿಂತು ಯಡಿಯೂರಪ್ಪ ಸಂಪುಟ ಪಾದರಸದಂತೆ ಓಡಾಡಿ ಕೆಲಸ ಮಾಡಿದ್ದರೆ ಎರಡನೇ ಅಲೆಯ ಅಬ್ಬರವನ್ನ ಸ್ವಲ್ಪ ಕಡಿಮೆ ಮಾಡಬಹುದಾಗಿತ್ತು. ಸಾವಿನ ಪ್ರಮಾಣವನ್ನ ತಗ್ಗಿಸಬಹುದಿತ್ತು. ವೈದ್ಯಕೀಯ ವ್ಯವಸ್ಥೆಯನ್ನ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೆ ಬಹುಜನರ ಪ್ರಾಣ ಉಳಿಯುತ್ತಿತ್ತು. ಎರಡನೇ ಅಲೆಯಲ್ಲಿ ಕಾಡುತ್ತಿರುವುದು ಆಮ್ಲಜನಕ. ಆಮ್ಲಜನಕ ವ್ಯವಸ್ಥೆಯನ್ನೂ ಸರಿಪಡಿಸಲು ವಿಳಂಬ ಮಾಡಬಾರದಿತ್ತು. ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಅನುಕೂಲ ಎಂಬ ಮಾತನ್ನ ಬಿಜೆಪಿಯೇ ಹೇಳಿಯೇ ಹೇಳಿತ್ತು. ಆ ಅರಿವು ರಾಜ್ಯ ಬಿಜೆಪಿ ಸರ್ಕಾರಕ್ಕೂ ಇರಬೇಕಿತ್ತು. ಕೇಂದ್ರ ಸರ್ಕಾರದ ಬಾಗಿಲು ತಟ್ಟಿ ಎದೆ ಉಬ್ಬಿಸಿ ಕೇಳಬೇಕಿತ್ತು. ಸಂಕಷ್ಟದಲ್ಲಿರುವ ನಮಗೆ ನಮ್ಮ ಪಾಲಿನ ಉತ್ಪಾದನೆಯ ಆಮ್ಲಜನಕ ಉಪಯೋಗಿಸಲು ಬಿಟ್ಟುಬಿಡಿ ಎಂದು ಕೂಗಿ ಹೇಳಬೇಕಿತ್ತು. ಆ ಪ್ರಯತ್ನವನ್ನೇ ಮಾಡದೇ ಹೈಕೋರ್ಟ್ ಆದೇಶದ ಬಳಿಕ ಎಚ್ಚೆತ್ತುಕೊಳ್ಳುವಂತಹ ಪರಿಸ್ಥಿತಿ ಬಂದಿದ್ದು ವಿಪರ್ಯಾಸವಲ್ಲದೇ ಮತ್ತೇನು ಹೇಳಿ.

Oxygen express Train bengaluru 2

ಈ ನಡುವೆ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆದುಹೋಯಿತು. 24 ಜೀವಗಳ ಪ್ರಾಣ ಪಕ್ಷಿ ಹಾರಿಹೋಯಿತು. ಆಗ ರಾಜ್ಯ ಸರ್ಕಾರ ಮೈಕೊಡವಿ ಎದ್ದು ನಿಲ್ಲಲು ಮುಂದಾಗಿದ್ದು ಅನ್ನುವ ಸತ್ಯವನ್ನು ರಾಜ್ಯ ಸರ್ಕಾರ ಬಹಿರಂಗವಾಗಿ ಒಪ್ಪಿಕೊಳ್ಳಬೇಕಿತ್ತು. ಆಂತರಿಕವಾಗಿ ಸತ್ಯವನ್ನು ಒಪ್ಪಿಕೊಳ್ಳುವ ಬಿಜೆಪಿ ಸರ್ಕಾರದ ಕಟ್ಟಾಳುಗಳು ಬಹಿರಂಗವಾಗಿ ತುಟಿ ಬಿಚ್ಚುವುದೇ ಇಲ್ಲ. ಚಾಮರಾಜನಗರ ದುರಂತದ ಬಳಿಕ ಸಚಿವರಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸುತ್ತಾರೆ. ಆಗ ಒಬ್ಬರ ಮೇಲೆ ಒಬ್ಬರು ಬಿದ್ದು ಸಭೆಗಳ ಮೇಲೆ ಸಭೆ.. ಪರಿಶೀಲನೆ ಮೇಲೆ ಪರಿಶೀಲನೆ ಶುರು ಮಾಡುತ್ತಾರೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿ ಏನು ಪ್ರಯೋಜನ ಎಂಬ ಟೀಕೆಯನ್ನೂ ಎದುರಿಸಿದ್ದು ಉಂಟು. ಈಗ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನವನ್ನ ಆರಂಭದಲ್ಲೇ ಮಾಡಿದ್ದರೇ ಎಷ್ಟು ನರಳುವ ಜೀವಗಳಿಗೆ ಆಮ್ಲಜನಕ ನೀಡಿ ಬದುಕು ಉಳಿಸಬಹುದಿತ್ತಲ್ಲವಾ ಸರ್ಕಾರ..!

smg vaccine que

ಇದೆಲ್ಲದರ ನಡುವೆ ಸುಳ್ಳು ಭರವಸೆ ನೀಡುವ ಚಟ. ರಾಜಕಾರಣಿಗಳಿಗೆ ಭರವಸೆ, ಆಶ್ವಾಸನೆ ಮಾಮೂಲು. ಆದರೆ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು ಸತ್ಯ ಹೇಳಿದರೆ ಏನು ಹೋಗುತ್ತಿತ್ತು. ಲಸಿಕೆ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ. ಮಲ್ಲಿಗೆ ಹೂವನ್ನು ಪೋಣಿಸುವಂತೆ ಸುಳ್ಳಿನ ಮೇಲೊಂದು ಸುಳ್ಳನ್ನ ಪೋಣಿಸುತ್ತಾ ಹೋಗುತ್ತಿದ್ದಾರೆ ಸರ್ಕಾರದ ಮಂತ್ರಿಗಳು. ಲಸಿಕೆ ಎಷ್ಟು ಬರುತ್ತೆ..? ಈಗ ಎಷ್ಟು ಲಭ್ಯ ಇದೆ..? ಯಾವಾಗ ಯಾರಿಗೆ ಲಸಿಕೆ ಕೊಡುತ್ತೇವೆ..? ಎಷ್ಟು ದಿನದಲ್ಲಿ ಎಲ್ಲರಿಗೂ ಸಿಗುತ್ತೆ..? ಈ ವಿಚಾರಗಳಲ್ಲಿ ಜನರಿಗೆ ತಿಳಿಸಬೇಕಿದ್ದ ಸರ್ಕಾರ ನಿತ್ಯ ಒಂದೊಂದು ಸುಳ್ಳು ಹೇಳಿ ಜನರನ್ನ ಬೀದಿ ಬೀದಿ ಅಲೆಸುವ ದುಸ್ಥಿತಿ ನಿರ್ಮಾಣ ಮಾಡಿದ್ದಾರೆ. ಆಮ್ಲಜನಕ, ಬೆಡ್, ಲಸಿಕೆ, ರೆಮಿಡಿಸಿವರ್ ಸೇರಿದಂತೆ ಕೋವಿಡ್ ಸಂಬಂಧಿತ ಎಲ್ಲ ವಿಚಾರಗಳಲ್ಲೂ ಒಂದೇ ಒಂದು ಸತ್ಯ ಹೇಳಿದ್ದರೆ ಜನರು ಸ್ವೀಕಾರ ಮಾಡುತ್ತಿದ್ದರು. ಜನರು ಅರ್ಥ ಮಾಡಿಕೊಳ್ಳುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಸಮರ್ಥನೆ ಮಾಡಿಕೊಳ್ಳಲು ಹೋಗಿ ಸುಳ್ಳಿನ ಗೋಡೆ ಕಟ್ಟಲು ಹೋಗಿ ಜನರ ಶಾಪಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನ ಮರೆಯಬಾರದು.

Corona Vaccine rush 4

ಕೊರೊನಾ ವಿಚಾರದಲ್ಲಿ ವಿರೋಧ ಪಕ್ಷಗಳ ಬಗ್ಗೆ ನಾವು ಮಾತಾಡುವುದೇ ಇಲ್ಲ. ಅವರು ಅಧಿಕಾರದಲ್ಲಿ ಇದ್ದಿದ್ದರೆ ಸ್ವರ್ಗವನ್ನೇ ತಂದು ಇಡುತ್ತಿದ್ದರು ಎಂದು ಕನಸನ್ನೂ ಕಾಣುವ ಮೂರ್ಖರು ನಾವಲ್ಲ. ಅವರಿಗೆ ಅವಕಾಶ ಸಿಕ್ಕಾಗ ರಾಜಕಾರಣವನ್ನೇ ಮಾಡುತ್ತಾರೆ. ಕೆಲವು ಸಲ ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸವನ್ನೂ ಮಾಡಿದರೂ ಆಶ್ಚರ್ಯ ಇಲ್ಲ. ಅಧಿಕಾರವಿಲ್ಲದವರನ್ನ ಕೇಳಿದರೂ ಒಂದೇ ಕೇಳದಿದ್ದರೂ ಒಂದೇ. ಆದರೆ ಅಧಿಕಾರದ ಗದ್ದುಗೆಯಲ್ಲಿ ಕುಳಿತವರಿಗೆ ಜನರ ಕಷ್ಟದ ಅರಿವು ಇರಬೇಕು. ಸ್ವರ್ಗದಲ್ಲೇ ಬದುಕುವಂತೆ ಮಾಡಲು ಆಗದಿದ್ದರೂ ನರಕದಂತಹ ವಾತಾವರಣ ನಿರ್ಮಾಣ ಮಾಡದಿದ್ದರೆ ಸಾಕು. ಇನ್ನಾದಾರೂ ಜನರ ಸಂಕಷ್ಟಕ್ಕೆ ಸಿದ್ಧತೆ ಮಾಡಿಕೊಳ್ಳಲಿ. ಎರಡನೇ ಅಲೆ ಇಳಿದು ಹೋದ ಬಳಿಕ ಮೂರನೇ ಅಲೆಯ ಎಚ್ಚರ ಇದ್ದೇ ಇರಬೇಕಿದೆ. ಆಗಲೂ ಈ ಉಡಾಫೆಯನ್ನು ಮಾಡದೇ ಅನುಭವದಿಂದ ಪಾಠ ಕಲಿಯಿರಿ. ಸುಖದಲ್ಲಿದ್ದಾಗ ನಿನ್ನ ಕೈ ಹಿಡಿದು ಅಂಬಾರಿ ಹತ್ತಿಸುತ್ತೇನೆ ಎಂಬುದನ್ನ ಬಿಟ್ಟು ಕಷ್ಟದಲ್ಲಿರುವ ನಿನಗೆ ಆಮ್ಲಜನಕ ಕೊಟ್ಟು ಕೈ ಹಿಡಿದು ಆಸ್ಪತ್ರೆಯಿಂದ ಮನೆಗೆ ವಾಪಸ್ ಕಳುಹಿಸುತ್ತೇನೆ ಎಂಬ ಭರವಸೆ ಬಿತ್ತಲಿ ಅನ್ನೋದು ನಮ್ಮ ಸಲಹೆ ಅಷ್ಟೇ.

[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು]

Share This Article
Leave a Comment

Leave a Reply

Your email address will not be published. Required fields are marked *