– ಪಿಜಿಐ ಪರೀಕ್ಷೆಯಲ್ಲಿ ಬಹಿರಂಗ
ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೊ ಹೊಸ ಅಪಾಯದ ಸುಳಿಯಲ್ಲಿ ಸಿಲುಕಿದ್ದು, ನೀರಿನಲ್ಲಿಯೂ ಕೊರೊನಾ ವೈರಸ್ ಪತ್ತೆಯಾಗಿರೋದು ಪಿಜಿಐ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಶವಗಳು ತೇಲಿ ಬಂದ ಹಿನ್ನೆಲೆಯಲ್ಲಿ ನೀರನ್ನ ಪರೀಕ್ಷೆಗೆ ಒಳಪಡಿಸಬೇಕೆಂಬ ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಐಸಿಎಂಆರ್ ಮತ್ತು ಡಬ್ಲ್ಯೂಹೆಚ್‍ಓ ಕೆಲ ಭಾಗದ ನೀರನ್ನ ಮಾದರಿಯಾಗಿ ತೆಗೆದುಕೊಂಡಿದ್ದು, ಪರೀಕ್ಷೆಗೆ ಮುಂದಾಗಿತ್ತು. ಕೊಳಚೆ ನೀರಿನ ಪರೀಕ್ಷೆಗಾಗಿ ಎಂಟು ಕೇಂದ್ರಗಳನ್ನ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಲಕ್ನೋ ನಗರದ ಮೂರು ಪ್ರದೇಶಗಳ ಕೊಳಚೆ ನೀರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಂದು ಸ್ಥಳದ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಪಿಜಿಐ ಮೈಕ್ರೋಬಯೋಲಾಜಿ ವಿಭಾಗದ ಅಧ್ಯಕ್ಷ ಉಜ್ಜವಲಾ ಘೋಷಾಲ್ ಖಚಿತ ಪಡಿಸಿದ್ದಾರೆ. ಲಕ್ನೋ ನಗರದ ಖಾದ್ರಾ, ಮೀನುಗಾರರ ಬಡವಾಣೆ, ಗಡಿಯಾರ ಗೋಪುರ ಬಡಾವಣೆಯಲ್ಲಿಯ ಕೊಳಚೆ ನೀರು ಸಂಗ್ರಹಿಸಲಾಗಿತ್ತು. ಪ್ರಯೋಗಾಲಯದ ಪರೀಕ್ಷೆಯಲ್ಲಿ ಒಂದು ಮಾದರಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಘೋಷಾಲ್ ಹೇಳುತ್ತಾರೆ.
ಪತ್ತೆಯಾಗಿರುವ ಕೊರೊನಾ ವೈರಸ್ ಮತ್ತು ಪರೀಕ್ಷೆಗೆ ಒಳಪಡಿಸಲಾಗಿದ್ದ ನೀರನ್ನ ಐಸಿಎಂಆರ್ ಗೆ ಹಸ್ತಾಂತರಿಸಲಾಗಿದೆ. ಜನರ ಮಲದಿಂದಾಗಿ ನೀರಿನಲ್ಲಿ ಕೊರೊನಾ ವೈರಸ್ ಕಂಡು ಬಂದಿರೊ ಸಾಧ್ಯತೆಗಳಿವೆ. ಹೋಮ್ ಐಸೋಲೇಟ್ ನಲ್ಲಿರೋ ಸೋಂಕಿತರು ಬಳಸೋ ಶೌಚಾಲಯದಿಂದ ವೈರಸ್ ಚರಂಡಿ ಸೇರ್ಪಡೆಯಾಗ್ತಿದೆ. ಈ ಸಂಬಂಧ ಹಲವು ದೇಶಗಳಲ್ಲಿ ಸಂಶೋಧನೆ ಸಹ ನಡೆಸಲಾಗುತ್ತಿದೆ. ಮಲ ಸೋಂಕಿನಿಂದ ಶೇಕಡ ಅರ್ಧದಷ್ಟು ಜನ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಸೋಂಕಿತ ಹೋಮ್ ಐಸೋಲೇಟ್ ನಲ್ಲಿದ್ದಾಗ ಆತನಿಗಾಗಿ ಪ್ರತ್ಯೇಕ ವಾಶ್ ರೂಮ್, ಶೌಚಾಲಯ ಇರಬೇಕು. ನೀರಿನ ಮೂಲಕ ಸೋಂಕು ಪಸರಿಸಲ್ಲ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದ್ರೆ ಜನರು ಎಚ್ಚರಿಕೆಯಿಂದ ಸರ್ಕಾರದ ಮಾರ್ಗಸೂಚಿ ಪಾಲಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.