ಖಾಸಗಿ ವೈದ್ಯರು ಗ್ರಾಮ ದತ್ತು ಸ್ವೀಕರಿಸಿ, ಕೊರೊನಾ ನಿಯಂತ್ರಿಸಬಹುದು- ದಾವಣಗೆರೆ ಡಿಸಿ ಮನವಿ

Public TV
2 Min Read
UDP DVG DC 1

ದಾವಣಗೆರೆ: ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಅತಿ ವೇಗವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಸಗಿ ವೈದ್ಯರು ಗ್ರಾಮ ದತ್ತು ಪಡೆಯಬೇಕು. ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗಪತ್ತೆ, ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.

corona virus 3

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿನ 2ನೇ ಅಲೆ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅನೇಕರು ನಮ್ಮ ಕಣ್ಣಮುಂದೆಯೇ ಮರೆಯಾಗುತ್ತಿದ್ದಾರೆ. ಸದ್ದಿಲ್ಲದೆ ಸೋಂಕು, ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೆ ಬಹಳಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ದಾವಣಗೆರೆಯ ಶೇ.70ರಷ್ಟು ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ, ಜಾಗೃತಿ ಹಾಗೂ ಚಿಕಿತ್ಸೆ ಸಿಗದೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ವೈದ್ಯರು ಒಂದೊಂದು ಗ್ರಾಮವನ್ನು ದತ್ತು ಪಡೆದು ಚಿಕಿತ್ಸೆ ನೀಡಬೇಕು ಎಂದರು.

ಈ ಹಿಂದೆ ಸಂಭವಿಸಿದ ಲಾತೂರ್ ಭೂಕಂಪ, ಕಂಡು ಕೇಳರಿಯದ ಪ್ರವಾಹ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಸಂದರ್ಭಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರ ತಂಡ, ದುರಂತ ಸ್ಥಳಗಳಿಗೆ ತೆರಳಿ, ಜನರ ಪ್ರಾಣ ರಕ್ಷಣೆ ಮಾಡಿದ ನಿದರ್ಶನವಿದೆ. ಹೀಗಾಗಿ ಜಿಲ್ಲೆಯ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದೆ, ಜಿಲ್ಲೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ತಿಳಿಸಿದರು.

CORONA VIRUS 2

ಲಾಕ್‍ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ರೋಗದ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶೇ.70ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಹೀಗಾಗಿ ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

CORONAVIRUS

ಗ್ರಾಮಗಳು ಉಳಿದರೆ, ಇಡೀ ದೇಶ ಉಳಿದಂತೆ. ಯಾವುದೇ ಗ್ರಾಮದಲ್ಲಿ 15 ರಿಂದ 20 ಜನರಲ್ಲಿ ಸೋಂಕು ಇರುವುದು ದೃಢಪಟ್ಟಲ್ಲಿ ಆಯಾ ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಅದ್ದರಿಂದ ಖಾಸಗಿ ವೈದ್ಯರು ಕನಿಷ್ಟ 2 ತಿಂಗಳು ಗ್ರಾಮಗಳ ದತ್ತು ಸ್ವೀಕರಿಸಬೇಕು. ಖಾಸಗಿ ಹಾಗೂ ಸರ್ಕಾರಿ ವೈದ್ಯರನ್ನು ಒಳಗೊಂಡ ನಿಯೋಜಿತ ತಂಡಗಳು ದತ್ತು ಸ್ವೀಕೃತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *