ಹಾಸನ: ಆಕ್ಸಿಜನ್ ಇಲ್ಲದೆ ಪ್ರತಿ ದಿನ ಹಾಸನದಲ್ಲಿ 10 ಜನ ಸಾಯುತ್ತಿದ್ದಾರೆ. ಇದನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ಕಟ್ಟಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರೇ ಬಡ ಹೆಣ್ಣು ಮಕ್ಕಳ ಮಾಂಗಲ್ಯ ಮಾರಿಸಬೇಡಿ. ಜನ ಉಳಿಸುವ ಯೋಗ್ಯತೆ ಇಲ್ಲದ ಮೇಲೆ ಯಾಕೆ ಈ ಸರ್ಕಾರ ಇರಬೇಕು. ಇಂತಹ ಕೆಟ್ಟ, ಮೂರು ಬಿಟ್ಟ ಸರ್ಕಾರವನ್ನು ನಾನು ಜೀವನದಲ್ಲಿ ನೋಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸರಿಯಾದ ರೀತಿ ಮೆಡಿಸಿನ್ ಕೊಟ್ಟು ನಮ್ಮ ಜನರನ್ನು ಉಳಿಸಿಕೊಡಿ. ಬಡವರ ಬಗ್ಗೆ ಈ ಸರ್ಕಾರಕ್ಕೆ ಕರುಣೆ ಇದೆಯಾ? ಯಡಿಯೂರಪ್ಪ ಅವರೇ ನಿಮ್ಮನೆ ಮಾತ್ರ ಚೆನ್ನಾಗಿರಬೇಕಾ? ಹಾಸನ ಜಿಲ್ಲೆಯನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸುತ್ತೀರಿ ಎಂದು ರೇವಣ್ಣ ಕಿಡಿಕಾರಿದರು.