ಬೆಳಗಾವಿ: ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ (78) ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಬಾಬಾಗೌಡ ಬೆಳಗಾವಿ ತಾಲೂಕಿನ ಚಿಕ್ಕಹಿರೇಬಾಗೇವಾಡಿ ಗ್ರಾಮದ ನಿವಾಸಿ ಯಾಗಿದ್ದು, ವಾರದ ಹಿಂದೆ ಬಾಬಾಗೌಡ ಪಾಟೀಲ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪಾಟೀಲರು ವಿಧಿವಶರಾಗಿದ್ದಾರೆ.
1989 ರಲ್ಲಿ ಬೆಳಗಾವಿ ಗ್ರಾಮೀಣ, ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ರೈತ ಸಂಘದ ಅಭ್ಯರ್ಥಿ ಆಗಿ ವಿಧಾನಸಭೆ ಪ್ರವೇಶಿಸಿದ್ದ ಬಾಬಾಗೌಡ, 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಗೆಲುವು ಕಂಡಿದ್ದರು.
ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಬಾಬಾಗೌಡ, ದೇಶದಲ್ಲಿ ಗ್ರಾಮಸಡಕ್ ಯೋಜನೆ ಜಾರಿಗೊಳಿಸಿದ್ದ ಕೀರ್ತಿಗಳಿಸಿದ್ದರು. ನಂತರ ರಾಜಕೀಯ ಏಳು, ಬೀಳು ಅನುಭವಿಸುತ್ತಿದ್ದ ಅವರು, ರಾಜ್ಯದಲ್ಲಿ ರೈತ ಹೋರಾಟಗಳಲ್ಲಿ ಮೂಂಚೂಣಿಯಲ್ಲಿದ್ದರು.