ದ.ಕ ಜಿಲ್ಲಾಡಳಿತದಿಂದ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಸುರಕ್ಷಾ ಲಸಿಕಾ ಅಭಿಯಾನ

Public TV
2 Min Read
HSN 8

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ -19 ನಿಯಂತ್ರಣ ಲಸಿಕೆ ನೀಡುವ ಕಾರ್ಯಕ್ರಮದ ಮೂಲಕ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರತಿನಿಧಿಗಳಿಗೆ ಲಸಿಕೆ ನೀಡಲಾಗಿದೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ಒಟ್ಟು 442, ಪುತ್ತೂರು ಕೇಂದ್ರದಲ್ಲಿ 102, ಸುಳ್ಯ ಕೇಂದ್ರದಲ್ಲಿ 42, ಬೆಳ್ತಂಗಡಿಯಲ್ಲಿ 52, ಬಂಟ್ವಾಳ ತಾಲೂಕಿನಲ್ಲಿ 12 ಮಂದಿ ಸೇರಿದಂತೆ ಒಟ್ಟು 660 ಪ್ರತಿನಿಧಿಗಳಿಗೆ ಲಸಿಕೆ ನೀಡಲಾಯಿತು. ವಿವಿಧ ತಾಲೂಕು ಪತ್ರಕರ್ತರ ಸಂಘ ಹಾಗೂ ಆರೋಗ್ಯ ಇಲಾಖೆ ಜಿಲ್ಲಾಡಳಿತದ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಅಭಿಯಾನ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

VACCINE 4

ಈ ಅಭಿಯಾನಕ್ಕೆ ರಾಜ್ಯ ಮುಜರಾಯಿ ಖಾತೆ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೇ 12 ರಂದು ನಗರದ ಪತ್ರಿಕಾ ಭವನದಲ್ಲಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಭಾಗವಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳ ಜೊತೆ ಲಸಿಕೆಯನ್ನು ನೀಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಮುಂಚೂಣಿ ಕಾರ್ಯಕರ್ತರಾದ ಪತ್ರಕರ್ತರಿಗೂ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಸಚಿವರು ಕ್ರತಜ್ಞತೆ ಸಲ್ಲಿಸಿದರು.

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತ ಸಂಘ, ಪತ್ರಿಕಾ ಭವನ ಟ್ರಸ್ಟ್, ಪ್ರೆಸ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದ ದೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಲಸಿಕಾ ಅಭಿಯಾನಕ್ಕೆ ಉಸ್ತುವಾರಿ ಸಚಿವರು ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.

FotoJet 9 2

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ವಾರ್ತಾಧಿಕಾರಿ ಮಂಜುನಾಥ್, ಆರೋಗ್ಯ ಇಲಾಖೆಯ ಕೋವಿಡ್ ಲಸಿಕಾ ಅಭಿಯಾನದ ಸಂಚಾಲಕ ಡಾ.ರಾಜೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರು ಮತ್ತು ಪದಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ ಪ್ರಥಮ ಆದ್ಯತೆಯಲ್ಲಿ ಲಸಿಕೆಯನ್ನು ನೀಡಲು ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕೆ ನೀಡುವ ಅಭಿಯಾನ ಜಿಲ್ಲೆಯಾದ್ಯಂತ ನಡೆಯಿತು.

Vaccine

Share This Article
Leave a Comment

Leave a Reply

Your email address will not be published. Required fields are marked *