ವ್ಯಾಕ್ಸಿನ್ ತೆಗೆದುಕೊಳ್ಳದಂತೆ ಚರ್ಚ್‍ಗಳಲ್ಲಿ ಅಪಪ್ರಚಾರ- ಶೋಭಾ ಆರೋಪ

Public TV
2 Min Read
ckm shobha karandlaje

– ವಿಶ್ವದೆದುರು ಭಾರತ ಕುಗ್ಗಿಸುವಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ

ಚಿಕ್ಕಮಗಳೂರು: ಚರ್ಚ್‍ಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬಾರದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

mdk vaccine web

ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಡಿಗೆರೆ, ಆಲ್ದೂರು ಸೇರಿದಂತೆ ಕೆಲ ಭಾಗದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಚರ್ಚ್‍ಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಚರ್ಚ್‍ಗಳಲ್ಲಿ ಹೇಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರು, ಏಕೆ ಈ ರೀತಿ ಹೇಳುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದರು.

ಬೇರೆಯವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಆದರೆ ಅವರೇ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಬೇರೆ ಚರ್ಚ್‍ಗಳಲ್ಲಿ ಸಹ ಇರಬಹುದು. ಪ್ರೊಟೆಸ್ಟೆಂಟ್, ಸೆಂಥಕೋಸ್ಟ್ ಸೇರಿದಂತೆ ಇತ್ತೀಚೆಗೆ ಬಂದ ಚರ್ಚ್‍ಗಳಲ್ಲಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Vaccine

ಮೊದಲು ಕಾಂಗ್ರೆಸ್ಸಿನವರು ಕೂಡ ಇದೇ ರೀತಿ ಮಾಡಿ ಜನರ ದಿಕ್ಕು ತಪ್ಪಿಸಿದ್ದರು. ಬಳಿಕ ಕಾಂಗ್ರೆಸ್ ಮುಖಂಡರೇ ಹೋಗಿ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ನ ಟೂಲ್ ಕಿಟ್ ದೇಶಕ್ಕೆ ಅವಮಾನ. ಕೊರೊನಾವನ್ನು ಇಡೀ ಜಗತ್ತೇ ಚೀನಾ ವೈರಸ್ ಎಂದು ಹೇಳುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದು ಇಂಡಿಯಾ ವೈರಸ್, ಮೋದಿ ವೈರಸ್ ಎಂದು ದೇಶವನ್ನೇ ಅವಮಾನಿಸುತ್ತಿದೆ. ಈ ಮೂಲಕ ವಿಶ್ವದೆದುರು ದೇಶವನ್ನು ಕುಗ್ಗಿಸಿ, ಅಪರಾಧಿ ಜಾಗದಲ್ಲಿ ನಿಲ್ಲಿಸುವ ಷಡ್ಯಂತ್ರ ಕಾಂಗ್ರೆಸ್ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CongressFlags1

ಇದು ಕಾಂಗ್ರೆಸ್‍ನ ವೋಟ್ ಬ್ಯಾಂಕ್ ರಾಜಕಾರಣ. ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಎಲ್ಲರೂ ರಾಜಕಾರಣ ಮಾಡೋಣ. ಆದರೆ ಈಗ ದೇಶದಲ್ಲಿ ಯುದ್ಧದ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಸರಿಯಲ್ಲ. ಚೀನಾ ನಮ್ಮ ವೈರಿ ದೇಶ, ಕಾಂಗ್ರೆಸ್‍ನವರು ಚೀನಾ ಮೀರಿಸುವ ರೀತಿ ಮಾತನಾಡುತ್ತಿದ್ದಾರೆ. ದೇಶ, ವ್ಯಾಕ್ಸಿನ್, ಮೋದಿ ವೈರಸ್, ಇಂಡಿಯಾ ವೈರಸ್ ಎಂದು ಹೇಳುವವರ ವಿರುದ್ಧ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ಅಂಗಾರ, ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಉಪಸಭಾಪತಿ ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ ಉಪಸ್ಥಿತಿರಿದ್ದರು.

Share This Article
Leave a Comment

Leave a Reply

Your email address will not be published. Required fields are marked *