ತೌಕ್ತೆಗೆ ಕರ್ನಾಟಕದಲ್ಲಿ 6 ಬಲಿ – ಗೋವಾದಲ್ಲಿ ಬಿರುಗಾಳಿ ಸಹಿತ ಮಳೆ: ಎಲ್ಲೆಲ್ಲಿ ಏನಾಗಿದೆ?

Public TV
2 Min Read
tauktae cyclone 2 e1621179860138

ಬೆಂಗಳೂರು/ಪಣಜಿ: ತೌಕ್ತೆ ಚಂಡಮಾರುತ ಗುಜರಾತ್‍ನತ್ತ ತೆರಳುತ್ತಿದೆ. ಆದರೆ ತೌಕ್ತೆಯಿಂದ ಸೃಷ್ಟಿಯಾದ ಮಳೆಗೆ ಕರ್ನಾಟಕದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಬೆಳಗಾವಿಯ ಇಟಗಿಯಲ್ಲಿ ಗೋಡೆ ಕುಸಿದು ಇಬ್ಬರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 73 ಹಳ್ಳಿಗಳು ಚಂಡಮಾರುತದಿಂದ ತೊಂದರೆ ಅನುಭವಿಸಿವೆ. 112 ಮನೆಗಳಿಗೆ ಹಾನಿ ಉಂಟಾಗಿದೆ. 318 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

tauktae cyclone 3

ತೌಕ್ತೆ ಎಫೆಕ್ಟ್ ಉತ್ತರ ಕನ್ನಡದಲ್ಲಿ ಕೊಂಚ ಹೆಚ್ಚೆ ಎನ್ನುವಷ್ಟರ ಮಟ್ಟಿಗೆ ಇತ್ತು. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಸ್ಥಿತಿ ಏರ್ಪಟ್ಟಿತ್ತು. ನೂರಾರು ಮನೆಗಳು ಜಲಾವೃತಗೊಂಡಿವೆ. ಕುಮಟಾದ ಶಶಿಹಿತ್ತಲು, ಗುಂದ ಗ್ರಾಮದ ನೂರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.

ಮುರ್ಡೇಶ್ವರದ ಬೀಚ್ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಹಲವೆಡೆ ಗಾಳಿ ಆರ್ಭಟಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದೆ. ಮಜೋರ್ಡಾ ಬಳಿ ಚಲಿಸ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಮರ ಉರುಳಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.

tauktae cyclone 4

ಉಡುಪಿ ಜಿಲ್ಲೆಯಲ್ಲಿ ಸಮುದ್ರ ಬದಿಯ ಮನೆಗಳು ಮರಳಿನಿಂದ ಭಾಗಶಃ ಮುಳುಗಿದೆ. ನೂರಾರು ತೆಂಗಿನ ಮರ ಸಮುದ್ರದ ಪಾಲಾಗಿವೆ. ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮನೆ, ಶೆಡ್‍ಗಳಿಗೆ ಹಾನಿಯಾಗಿದೆ. ಮಂಗಳೂರು ಬಳಿಯ ಅರಬ್ಬಿ ಸಮುದ್ರದಲ್ಲಿ ಕೋರಮಂಡಲ್ ಸ್ಟಗ್ ಸಿಲುಕಿದ್ದು, ಅದರಲ್ಲಿರುವ 9 ಮಂದಿಯ ರಕ್ಷಣೆಗೆ ತೀವ್ರ ಪ್ರಯತ್ನ ನಡೆಸಲಾಗ್ತಿದೆ. ಹೆಲಿಕಾಪ್ಟರ್ ನೆರವನ್ನು ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಮಾಪಿಳ್ಳೆ ಬಳಿ ಸೇತುವೆ ಕೊಚ್ಚಿಹೋಗಿದೆ. ಸುಂಟಿಕೊಪ್ಪದಲ್ಲಿ ತಡೆ ಗೋಡೆಯೊಂದು ಕುಸಿದಿದೆ. ಕಾವೇರಿ ನದಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರಿನಮಟ್ಟ ಸ್ವಲ್ಪ ಏರಿಕೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗಿದ್ದು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದೆ. ಹಾವೇರಿ, ಬೆಳಗಾವಿ, ಧಾರವಾಡದಲ್ಲೂ ಮಳೆಯಾಗಿದೆ. ಬೆಂಗಳೂರಿನಲ್ಲೂ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು.

tauktae cyclone 5

ಗೋವಾ ವರದಿ: ನಿನ್ನೆ ಕೇರಳವನ್ನು ತತ್ತರಿಸುವಂತೆ ಮಾಡಿದ್ದ ತೌಕ್ತೆ ಚಂಡಮಾರು ಇಂದು ಪುಟ್ಟ ರಾಜ್ಯ ಗೋವಾಗೆ ಕಂಟಕವಾಗಿದೆ. ಇವತ್ತು ಇಡೀ ಬಿರುಗಾಳಿ ಸಹಿತ ಜೋರು ಮಳೆ ಆಗಿದ್ದು, ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮ, ಹೆಚ್ಚುಕಡಿಮೆ ಗೋವಾದ ಬಹುತೇಕ ಕಡೆ ವಿದ್ಯುತ್ ಸರಬರಾಜಿನಲ್ಲಿ ತೀವ್ರ ವ್ಯತ್ಯಯವಾಗಿದೆ.

ಪಣಜಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕೇರಳದಲ್ಲಿ ತೌಕ್ತೆ ಚಂಡಮಾರುತದ ತೀವ್ರತೆ ಇವತ್ತು ಹೆಚ್ಚು ಕಂಡುಬರಲಿಲ್ಲ. ಮಹಾರಾಷ್ಟ್ರದಲ್ಲಿಯೂ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ.. ಮುಂಜಾಗ್ರತಾ ಕ್ರಮವಾಗಿ ನಾಳೆ ಮುಂಬೈನಲ್ಲಿ ವ್ಯಾಕ್ಸಿನೇಷನ್ ರದ್ದು ಮಾಡಲಾಗಿದೆ.

ನಾಳೆ ಮತ್ತು ನಾಡಿದ್ದು ಗುಜರಾತ್‍ನಲ್ಲಿ ಭಾರೀ ಮಳೆ ಆಗಲಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೇ 21ರವರೆಗೂ ಗುಜರಾತ್‍ನಲ್ಲಿ 56 ರೈಲುಗಳನ್ನು ರದ್ದು ಮಾಡಲಾಗಿದೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ತೌಕ್ತೆ ಚಂಡಮಾರುತ ಗುಜರಾತ್, ಡಿಯು ಡಾಮನ್, ದಾದ್ರಾ ನಗರ್ ಹವೇಲಿಯನ್ನು ಹಾದು ಹೋಗಲಿದೆ.

Share This Article
Leave a Comment

Leave a Reply

Your email address will not be published. Required fields are marked *