ರಷ್ಯಾದ ಸ್ಪುಟ್ನಿಕ್ V ಲಸಿಕೆಗೆ 995 ರೂ. ದರ ನಿಗದಿ – ಮೊದಲ ಡೋಸ್ ವಿತರಣೆ

Public TV
2 Min Read
Sputnik V main

ಹೈದರಾಬಾದ್: ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ V ಲಸಿಕೆಯ ಒಂದು ಡೋಸ್‍ಗೆ ಭಾರತದಲ್ಲಿ 995.40 ರೂ. ದರವನ್ನು ನಿಗದಿ ಮಾಡಲಾಗಿದೆ.

ಹೈದರಾಬಾದಿನ ರೆಡ್ಡೀಸ್ ಕಂಪನಿ ಈ ದರವನ್ನು ನಿಗದಿ ಮಾಡಿದ್ದು, ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ನೀಡಲಾಗಿದೆ.  ರಷ್ಯಾದಿಂದ ಆಮದಾಗಿರುವ ಈ ಲಸಿಕೆಗೆ 948 ರೂ. ದರ ಇದ್ದು  ಶೇ.5 ಜಿಎಸ್‍ಟಿ ಸೇರಿಸಿದಾಗ ದರ 995 ರೂ. ಆಗುತ್ತದೆ. ಭಾರತದಲ್ಲಿ ಈ ಲಸಿಕೆ ತಯಾರಾದರೆ ದರ ಮತ್ತಷ್ಟು ಇಳಿಕೆಯಾಗಲಿದೆ.

ದೇಶದಲ್ಲಿ ಲಸಿಕೆಗೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಯನ್ನು ಮುಂದಿನ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು  ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು.

Sputnik V corona covid vaccine 1

ಸ್ಪುಟ್ನಿಕ್ ಲಸಿಕೆ ದ್ರವ ಮತ್ತು ಪೌಡರ್ ಎರಡೂ ರೂಪದಲ್ಲಿ ಲಭ್ಯವಿದೆ. ದ್ರವ ರೂಪದ ಲಸಿಕೆಯನ್ನು ಮೈನಸ್ 18 ಡಿಗ್ರಿ, ಪೌಡರ್ ರೂಪದ ಲಸಿಕೆಯನ್ನು 2 ಮತ್ತು 8 ಡಿಗ್ರಿಯಲ್ಲಿ ಸಂಗ್ರಹ ಮಾಡಬೇಕಾಗುತ್ತದೆ.  ಲಸಿಕೆ ತಗೆದುಕೊಂಡ 3 ವಾರದ ಒಳಗಡೆ ಮತ್ತೊಮ್ಮೆ ಈ ಲಸಿಕೆಯನ್ನು ತೆಗದುಕೊಳ್ಳಬೇಕಾಗುತ್ತದೆ.

ಪ್ರಸ್ತುತ ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಈ ಎರಡು ಲಸಿಕೆ ಹೋಲಿಸಿದರೆ ಸ್ಪುಟ್ನಿಕ್ ಲಸಿಕೆ ಶೇ.91 ರಷ್ಟು ಪರಿಣಾಮಕಾರಿ ಎಂಬ ವರದಿ ಪ್ರಕಟವಾಗಿದೆ. ಆಕ್ಸ್ ಫರ್ಡ್ ಅಸ್ಟ್ರಾಜೆನಿಕಾ ಲಸಿಕೆಯನ್ನು ಪುಣೆಯ ಸೆರಂ ಇನ್‍ಸ್ಟಿಟ್ಯೂಟ್ ತಯಾರಿಸುತ್ತಿದ್ದರೆ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

Sputnik V Russia Corona Covid Vaccine

ಕೊರೊನಾ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು.

2020ರ ಆಗಸ್ಟ್ ನಲ್ಲಿ ರಷ್ಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿತ್ತು. ಕೊರೊನಾ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡಿತ್ತು. ಇದನ್ನೂ ಓದಿ: ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ V ಲಸಿಕೆ

corona sputnik v vaccine

ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ  ರೆಡ್ಡೀಸ್ ಕಂಪನಿ ಜನರ ಮೇಲೆ ಪ್ರಯೋಗ ನಡೆಸಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದಿನ ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ. ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿರುವುದು ವಿಶೇಷ.

ಮುಂದಿನ ದಿನಗಳಲ್ಲಿ ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಸುಮಾರು 20 ಬೇರೆ ಬೇರೆ ಕೊರೋನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ.

Sputnik V Russia Corona Covid Vaccine 2

ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ.

ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *