ಔಷಧ ಕಂಪನಿಗಳ ವಿರುದ್ಧ ಗುಡುಗಿದ ಡಿಸಿಎಂ: ರೆಮ್‍ಡಿಸಿವರ್ ಕಂಪನಿಗಳಿಗೆ ನೋಟಿಸ್

Public TV
2 Min Read
dcm ashwathnarayan 2

ಬೆಂಗಳೂರು: ರಾಜ್ಯಕ್ಕೆ ನಿಗದಿಪಡಿಸಿದ ರೆಮ್‍ಡಿಸಿವರ್ ಕೋಟಾವನ್ನು ಸಕಾಲಕ್ಕೆ ಸರಿಯಾಗಿ ಪೂರೈಕೆ ಮಾಡದಿರುವ ಔಷಧ ಕಂಪನಿಗಳಿಗೆ ನೊಟೀಸ್ ನೀಡಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರದಲ್ಲಿ ಭಾನುವಾರ ಸಂಜೆ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ನಿಗದಿತ ಕೋಟಾ ಕೊಡಲು ಕಂಪನಿಗಳಿಗೆ ಏನು ಸಮಸ್ಯೆ? ಕೊಡಬೇಕು ಎಂದರೆ ಕೊಡಬೇಕಷ್ಟೇ. ಅನಕ್ಷರಸ್ಥರಿಗೂ ಕಾನೂನಿನ ಅರಿವು ಇರುತ್ತದೆ. ದೊಡ್ಡ ದೊಡ್ಡ ಔಷಧ ಕಂಪನಿಗಳಿಗೆ ಇರುವುದಿಲ್ಲವೆ? ಒಂದು ದಿನ ಸಪ್ಲೈ ಮಾಡಿ ಇನ್ನೊಂದು ದಿನ ಮಾಡದಿದ್ದರೆ ಹೇಗೆ? ಎಂದು ಹರಿಹಾಯ್ದರು.

ಮಹಾರಾಷ್ಟ್ರದ ನಂತರ ಇಡೀ ದೇಶದಲ್ಲಿಯೇ ಅತಿಹೆಚ್ಚು ರೆಮ್‍ಡಿಸಿವರ್ ಹಂಚಿಕೆ ಆಗಿರುವುದು ಕರ್ನಾಟಕಕ್ಕೆ ಮಾತ್ರ. ಆದರೆ, ಪೂರೈಕೆ ನಿರಂತರತೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಇದನ್ನು ಸರಿ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಂಡಿದ್ದೇವೆ. ಸರಿಯಾಗಿ ಪೂರೈಕೆ ಮಾಡದಿದ್ದರೆ ಆ ಕಂಪನಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಗುಡುಗಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೇರವಾಗಿ ಸರಕಾರವೇ ರೆಮ್‍ಡಿಸಿವರ್ ನೀಡುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪೋರ್ಟಲ್ ಮೂಲಕ ಪಡೆಯಬೇಕು. ಯಾರಿಗೂ ನಾವು ಕೈಗೆ ಈ ಔಷಧ ಕೊಡುವುದಿಲ್ಲ. ಯಾರಿಗೆ ಕೊಡುತ್ತೆವೆಯೋ ಆ ಸೋಂಕಿತರ ಮೊಬೈಲ್‍ಗೂ ಸಂದೇಶ ಹೋಗುತ್ತದೆ. ಎಲ್ಲವೂ ಪಾರದರ್ಶಕವಾಗಿರುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *