– ಬೆಳಗಾವಿಯಲ್ಲಿ ಸಾವಿನಲ್ಲೂ ಸುಳ್ಳು ಲೆಕ್ಕ
ಬೆಳಗಾವಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ಮಹಾಮಾರಿಗೆ ಬರೋಬ್ಬರಿ 42 ಜನ ಸಾವನ್ನಪ್ಪಿದ್ದು, ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಈ ಮೂಲಕ ಸರ್ಕಾರ ಸಾವಿನಲ್ಲೂ ಸುಳ್ಳು ಲೆಕ್ಕ ನೀಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 42 ಜನ ಸೋಂಕಿತರ ಶವಗಳನ್ನು ಮಣ್ಣು ಮಾಡಲಾಗಿದ್ದು, ಸಾವಿನ ಸುದ್ದಿಗಳನ್ನು ಕೇಳಿದ ಸಂಬಂಧಿಕರು ಆಘಾತಕ್ಕೋಳಗಿದ್ದಾರೆ. ಕೋರ್ಟ್ ಆವರಣದ ಮುಂದಿರುವ ಅಂಜುಮನ್ ಸ್ಮಶಾನದಲ್ಲಿ 28 ಶವಗಳನ್ನು ಹೂತರೆ, ಸದಾಶಿವ ನಗರದ ಸ್ಮಶಾನದಲ್ಲಿ 14 ಶವಗಳನ್ನು ಸುಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರ ಮಾಡುವ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
ಒಂದೆಡೆ ಮಹಾನಗರ ಪಾಲಿಕೆಯ ಸಿಬ್ಬಂದಿ ಶವಸಂಸ್ಕಾರ ಮಾಡುತ್ತಿದ್ದು, ಇನ್ನೊಂದೆಡೆ ಅಂಜುಮನ್ ಸಂಸ್ಥೆಯ ಸ್ವಯಂ ಸೇವಕರು ನಾಲ್ಕು ಸದಸ್ಯರನ್ನು ಹೊಂದಿದ ಒಂದು ತಂಡದಂತೆ ಮೂರು ತಂಡಗಳು ಶವಸಂಸ್ಕಾರ ಮಾಡುತ್ತಿವೆ. ಬೆಳಗಾವಿ ಮಹಾನಗರದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಿರುವ ಅಂಜುಮನ್ ಸಂಸ್ಥೆಯ ಸಮಾಜ ಸೇವಕರು ಈ ಭಯಾನಕ ಸತ್ಯವನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟಿದ್ದಾರೆ.
ಆರೋಗ್ಯ ಇಲಾಖೆಯ ನಿನ್ನೆಯ ಕೊರೊನಾ ಬುಲೆಟಿನ್‍ನಲ್ಲಿ ಸುಳ್ಳು ಲೆಕ್ಕ ತೋರಿಸಲಾಗಿದ್ದು, ಬೆಳಗಾವಿಯಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಆದರೆ ಸ್ಮಶಾಣಗಳ ಲೆಕ್ಕದ ಪ್ರಕಾರ 42 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸರ್ಕಾರ ಸುಳ್ಳು ಲೆಕ್ಕ ಕೊಡುತ್ತಿದೆಯಾ ಎಂಬ ಅನುಮಾನ ಇದೀಗ ಎದ್ದಿದೆ. ಬರೋಬ್ಬರಿ 40 ಜನ ಸಾವಿನ ಕುರಿತು ಆರೋಗ್ಯ ಇಲಾಖೆ ಸುಳ್ಳು ಲೆಕ್ಕ ನೀಡಿದ್ದು, ಸಾರ್ವಜನಿಕರು ಭಯಪಡುವಂತಾಗಿದೆ.