ಮಂಡ್ಯ: ಜಿಲ್ಲೆಯಲ್ಲಿ ಎದುರಾಗುತ್ತಿರುವ ಆಕ್ಸಿಜನ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಗೆ ಪ್ರತಿ ದಿನ 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ ಗಳನ್ನು ನೀಡಲು ಮುಂದಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದಿದ್ದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚೆ ಮಾಡಲಾಯಿತು. ಇದೇ ವೇಳೆ ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ಏನು ಮಾಡಬೇಕೆಂದು ಸಹ ಚಿಂತನೆ ಮಾಡಲಾಯಿತು. ಆದರೆ ಸದ್ಯ ಸರ್ಕಾರದಿಂದ ಎಂಪಿ ಫಂಡ್ ಅಥವಾ ಬೇರೆ ಯಾವುದೂ ಅನುದಾನ ಇಲ್ಲದ ಕಾರಣ ಸುಮಲತಾ ಅವರು ನನ್ನ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 2000 ಲೀಟರ್ ಆಕ್ಸಿಜನ್ ಕಳಿಸಿಕೊಡುತ್ತೇನೆ ಎಂದು ತಿಳಿಸಿದ್ದರು.
ಸುಮಲತಾ ಅವರು ಅಂದು ಕೊಟ್ಟ ಭರವಸೆಯಂತೆ ಇಂದು 2000 ಲೀಟರ್ ಸಾಮರ್ಥ್ಯ 20 ಜಂಬೋ ಸಿಲಿಂಡರ್‍ನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪ್ರತಿ ದಿನ ಇದೇ ರೀತಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಸುಮಲತಾ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.