– ಭಾರತ ತೊರೆದು ಲಂಡನ್ ಸೇರಿದ ಆದಾರ್ ಪೂನಾವಾಲಾ
– ಪವರ್ ಫುಲ್ ಜನರಿಂದಲೇ ಬೆದರಿಕೆ, ಒತ್ತಡ
ನವದೆಹಲಿ: ಬೆದರಿಕೆ ಬಂದ ಹಿನ್ನೆಲೆ ಕೋವಿಶೀಲ್ಡ್ ಲಸಿಕೆ ತಯಾರಿಕಾ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ಭಾರರ ತೊರೆದು ಲಂಡನ್ ಸೇರಿದ್ದಾರೆ. ಇದು ದೀರ್ಘ ಸಮಯದ ಪ್ರವಾಸ ಆಗಿದ್ದು, ಇಂತಹ ಸ್ಥಿತಿಯಲ್ಲಿ ಇರಲಾರೆ ಎಂದು ಪೂನಾವಾಲಾ ಹೇಳಿಕೊಂಡಿದ್ದಾರೆ.
ನಾನು ಲಂಡನ್ ನಲ್ಲಿ ಹೆಚ್ಚು ದಿನಗಳನ್ನ ಕಳೆಯಲಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಭಾರತದಲ್ಲಿ ಇರಲು ಸಾಧ್ಯವಿಲ್ಲ. ಎಲ್ಲ ಜವಾಬ್ದಾರಿಗಳನ್ನು ನನ್ನ ಹೆಗಲ ಮೇಲೆ ಹಾಕಲಾಗುತ್ತಿದೆ. ಇದೆಲ್ಲವನ್ನು ನನ್ನ ಒಬ್ಬನಿಂದ ನಿಭಾಯಿಸಲು ಆಗಲಾರದು. ನನ್ನ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ಕೆಲವು ಸಮಯಗಳಿಂದ ಪ್ರಭಾವಿ ಜನರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪೂನಾವಾಲಾ ಹೇಳಿಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಪೂನಾವಾಲಾಗೆ ಭದ್ರತೆ ಕೋರಿ ಸಿರಂ ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16 ರಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ಸಹ ಪೂನಾವಾಲಾ ಅವರಿಗೆ ವೈ ದರ್ಜೆ ಭದ್ರತೆ ಒದಗಿಸಿತ್ತು.