ಹುಬ್ಬಳ್ಳಿ: ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರಾಜ್ಯದಲ್ಲಿನ ಮಿಲಿಟರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಶೀಘ್ರವಾಗಿ ನಿರ್ಮಿಸಲಾಗುತ್ತಿರುವ 66 ಬೆಡ್ ಗಳ ಕೋವಿಡ್ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಆರ್.ಡಿ.ಓ ಹಾಗೂ ಇತರೆ ರಕ್ಷಣಾ ಏಜನ್ಸಿಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮೇಕ್ ಶಿಫ್ಟ್ (ತ್ವರಿತವಾಗಿ ನಿರ್ಮಿಸು) ಕೋವಿಡ್ ಆಸ್ಪತ್ರೆಗಳನ್ನು ನಿರ್ಮಿಸುವಂತೆ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ರಕ್ಷಣಾ ಸಚಿವರು ನಿರ್ಣಯ ಕೈಗೊಳ್ಳುವರು ಎಂಬ ಆಶಾಭಾವವಿದೆ. ಯುದ್ದೋಪಾದಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿರ್ವಹಣೆ ಮಾಡುತ್ತಿವೆ. ಮುಜಾಗೃತವಾಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಡ್ ಗಳನ್ನು ತಯಾರು ಮಾಡಲಾಗುವುದು. ಆದರೆ ಅವುಗಳನ್ನು ಬಳಸುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ವರದಿಗಳು ತಡವಾಗಿ ಬರುತ್ತಿರುವ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ರಾಜ್ಯಮಟ್ಟದಲ್ಲಿ ಈ ಕುರಿತಂತೆ ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಮಾತನಾಡುತ್ತೇನೆ ಕೋವಿಡ್ ಪಾಸಿಟಿವ್ ವರದಿ ಬೇಗ ಬಂದರೆ, ರೋಗಿಗಳಿಗೆ ತಡ ಮಾಡದೇ ಚಿಕಿತ್ಸೆ ನೀಡಬಹದು. ಈ ವರದಿಗಳನ್ನು ಶೀಘ್ರವಾಗಿ ನೀಡುವಂತೆ ಲ್ಯಾಬ್ ಟೆಕ್ನಿಷನ್ ಗಳಿಗೆ ಕೋರುತ್ತೇನೆ. ನೆಗೆಟಿವ್ ಇರುವ ವರದಿಗಳನ್ನು ಎರೆಡು ಮೂರು ದಿನಗಳು ತಡವಾಗಿ ನೀಡಬಹದು. ರಾಜ್ಯಕ್ಕೆ 1.22 ಲಕ್ಷ ರೆಮಿಡಿಸಿವರ್ ವೈಲ್ ಗಳನ್ನು ನೀಡಲಾಗಿದೆ. ಈ ಚುಚ್ಚುಮದ್ದನ್ನು ಯಾರಿಗೆ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಲಿ. ಜನರು ಅನಗತ್ಯವಾಗಿ ಆತಂಕ್ಕೆ ಒಳಗಾಗುವುದು ಬೇಡ. ಇದರಲ್ಲಿ ಶೋಷಣೆ ಆಗುತ್ತಿರುವ ವರದಿಗಳು ಬಂದಿವೆ. ರೆಮಿಡಿಸಿವರ್ ಕೊವೀಡ್ ಗೆ ರಾಮ ಬಾಣವಲ್ಲ ಎಂದು ಅಭಿಪ್ರಯಾಪಟ್ಟರು.
ದೇಶದಲ್ಲಿ ಇಂದು 2500 ಹೆಚ್ಚು ವೈರಲ್ ಲ್ಯಾಬರೋಟರಿಗಳಿವೆ. ಹುಬ್ಬಳ್ಳಿ ಕಿಮ್ಸ್, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಡಿಮಾನ್ಸ್ ನಲ್ಲಿ ಟೆಸ್ಟಿಂಗ್ ಲ್ಯಾಬ್ ಗಳಿವೆ. ಧಾರವಾಡ ಜಿಲ್ಲೆಯಲ್ಲಿ 17 ಸಂಚಾರಿ ಸ್ಯಾಬ್ ಸೆಂಟರ್ ಗಳಿವೆ. ಎಲ್ಲಿಯಾದರೂ ತೊಂದರೆಯಾಗಿದ್ದರೆ ಸರಿಪಡಿಸಲಾಗುವುದು. ಧಾರವಾಡ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಆಗಮಿಸಿದವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಹಳ್ಳಿಗಳಲ್ಲಿ ಕೂಡ ಡಂಗುರ ಸಾರಿಸಿ ಹೊರ ಜಿಲ್ಲೆಯಿಂದ ಬಂದವರನ್ನು ಪ್ರತ್ಯೇಕವಾಸದಲ್ಲಿ ಇಡಲಾಗುತ್ತಿದೆ.
ಕೋವಿಡ್ ಆಸ್ಪತ್ರೆ ನಿರ್ಮಾಣ
ಕಿಮ್ಸ್ ಆಸ್ಪತ್ರೆ ಆರಣದಲ್ಲಿ 66 ಬೆಡ್ ಗಳ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಆಕ್ಸಿಜನ್ ಸೌಲಭ್ಯವನ್ನು ಸಹ ರೋಗಿಗಳಿಗೆ ನೀಡಲಾಗಿವುದು. ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಕಾರ್ಯಾದೇಶವನ್ನು ಸಹ ನೀಡಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಏ.28 ರಂದು ಬೆಂಗಳೂರನಲ್ಲಿ 20 ಸಾವಿರಕ್ಕೂ ಅಧಿಕ ಹಾಗೂ ಧಾರವಾಡ ಜಿಲ್ಲೆಯಲ್ಲಿ 600 ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡನೇ ರೂಪಾಂತರ ವೈರಸ್ ರಾಜ್ಯ ಪ್ರವೇಶಿಸಿದರೆ ಬಹಳಷ್ಟು ತೊಂದರೆಯಾಗಲಿದೆ ಎಂಬ ಭಯ ಕಾಡುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 3000 ಕ್ಕೂ ಹೆಚ್ಚು ಬೆಡ್ ಗಳನ್ನು ತಯಾರು ಮಾಡಲಾಗುತ್ತಿದೆ ಎಂದರು.
ನಿರ್ಮಿತಿ ಕೇಂದ್ರದಿಂದ 66 ಲಕ್ಷ ವೆಚ್ಚದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇಕೋ ಇನ್ ಬಾಕ್ಸ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟು 1500 ಚದುರ ಮೀಟರ್ ವಿಸ್ತೀರ್ಣದ ಮೂರು ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ಕೇಂದ್ರ 22 ಹಾಸಿಗೆಗಳ ಸಾಮಾಥ್ರ್ಯ ಹೊಂದಿದೆ. ಇದರೊಟ್ಟಿಗೆ ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ 250 ಚದುರ ಮೀಟರ್ ವಿಸ್ತೀರ್ಣದಲ್ಲಿ 6 ಬಾತ್ ರೂಮ್ ಹಾಗೂ 6 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಭೇಟಿ ನೀಡಿದ 4 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡುಬಂದಿದ್ದು, ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಏ.30 ರಂದು ಖಾಸಗಿ ಆಸ್ಪತ್ರೆ ಕುರಿತು ಸಭೆ ನಡೆಸಲಾಗುವುದು. ಕಿಮ್ಸ್‍ನಲ್ಲಿ ಪ್ರತಿದಿನ 2000 ಕೋವಿಡ್ ಪರೀಕ್ಷೆ ನೆಡೆಸಲಾಗುತ್ತಿದೆ. ಕಿಮ್ಸ್ ಹೆಚ್ಚುವರಿಯಾಗಿ ಇನ್ನೊಂದು ಸ್ವಾಬ್ ಸಂಗ್ರಹ ಸೆಂಟರ್ ನಿರ್ಮಿಸಲು ನಿರ್ದೇಶನ ನೀಡಲಾಗುವುದು. ಹೆಚ್ಚಿನ ಲ್ಯಾಬ್ ಟೆಕ್ನಿಷಿಯನ್ ನೇಮಿಸಲಾಗುವುದು. ಗ್ರಾಮಗಳಿಗೆ ಆಗಮಿಸಿದವರ ವಿವರ ದಾಖಲಿಸಲು ಜಿ.ಪಂ. ಸಿಇಓ ಆದೇಶಿಸಿದ್ದಾರೆ. ಹಳ್ಳಿಗಳಲ್ಲಿ ಸಂಚಾರಿ ಲ್ಯಾಬ್ ಗಳಿಂದ ಸ್ಯಾಬ್ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗ ದಿನವೊಂದಕ್ಕೆ 1.75 ಲಕ್ಷ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಗೆ ಲಸಿಕೆ ಬಂದ 24 ತಾಸುಗಳಲ್ಲಿ ಹಂಚಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 17000 ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಕೋವ್ಯಾಕ್ಸಿನ್ ಲಭ್ಯತೆ ಆಧರಿಸಿ ಮೊದಲಬಾರಿಗೆ ಪಡೆಯುವವರಿಗೆ ನೀಡುತ್ತಿಲ್ಲ. ಎರಡನೇ ಹಂತದಲ್ಲಿ ಪಡೆಯುವವರಿಗೆ ನೀಡಲಾಗುತ್ತಿದೆ. ಜಿಲ್ಲೆಗೆ 750 ರೆಮಿಡಿಸಿವರ್ ವೈಲ್ ಗಳು ಬಂದಿದ್ದು, ಪ್ರತಿದಿನ ಜಿಲ್ಲೆಗೆ ರೆಮಿಡಿಸಿವರ್ ಕೋಟಾ ನಿಗದಿ ಪಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಉಪಸ್ಥಿತರಿದ್ದರು.