ಬೆಂಗಳೂರು: ಲಾಕ್‍ಡೌನ್ ಘೋಷಣೆ ಬೆನ್ನಲ್ಲೇ ಆರಂಭವಾದ ಜನರ ಗುಳೆ ಇನ್ನೂ ಮುಂದುವರಿದಿದೆ. ಜನರ ಲಗೇಜುಗಳ ಸಮೇತ ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ನಿಲ್ದಾಣಗಳತ್ತ ಆಗಮಿಸುತ್ತಿದ್ದಾರೆ. ಇನ್ನು ಸಿಕ್ಕ ಸಿಕ್ಕ ಖಾಸಗಿ ವಾಹನಗಳನ್ನು ಹಿಡಿದು ಊರು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನಿಂದ ಎಲ್ಲ ಜಿಲ್ಲೆಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಳದ ಹಿನ್ನೆಲೆ ಸಾರಿಗೆ ಇಲಾಖೆ ಸಹ ಬಸ್ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರಿನ ಸುತ್ತಮುತ್ತ ಸ್ಥಳಗಳಿಗೆ ತೆರಳಲು ಬಿಎಂಟಿಸಿ ಬಸ್ ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪರಿಣಾಮ ಏಕಕಾಲದಲ್ಲಿ ಹೆಚ್ಚಿನ ಬಸ್ ಗಳು ರಸ್ತೆಗೆ ಇಳಿದಿದ್ದರಿಂದ ಟ್ರಾಫಿಕ್ ಉಂಟಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಹೊರ ಭಾಗ, ಮೈಸೂರು ರೋಡ್, ನೆಲಮಂಗಲ ನವಯುಗ ಟೋಲ್ ಗೇಟ್ ಬಳಿ ಜನರ ಸಾಗರವೇ ನೆರದಿದೆ. ಚಿಕ್ಕ ಮಕ್ಕಳೊಂದಿಗೆ ನಾಲ್ಕೈದು ಬ್ಯಾಗ್ ಹಿಡಿದು ತಮ್ಮೂರ ಬಸ್ ಗಳಿಗಾಗಿ ಜನರು ಕಾಯುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಬೆಂಗಳೂರಿನಿಂದ ಸಮೀಪದಲ್ಲಿರೋ ಬಹುತೇಕ ತಮ್ಮ ದ್ವಿಚಕ್ರ ವಾಹನಗಳಲ್ಲಿ ಊರಿನತ್ತ ಹೊರಟಿದ್ದಾರೆ. ಅದೇ ರೀತಿಯಾಗಿ ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚಾಗಿ ಅಂತರ್ ರಾಜ್ಯ ಪ್ರಯಾಣಿಕರು ಕಾಣ ಸಿಗುತ್ತಿದ್ದಾರೆ.