ಬೆಂಗಳೂರು: ಮೋಹಕ ತಾರೆ ರಮ್ಯಾ ಚಿತ್ರರಂಗ ಹಾಗೂ ರಾಜಕೀಯ ಎರಡಕ್ಕೂ ಗುಡ್ ಬೈ ಹೇಳಿದ್ದಾರೆ. ಮಂಡ್ಯ ಸಂಸದೆಯಾಗಿದ್ದಾಗ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗ್ತಿದ್ದ ರಮ್ಯಾ ಸದ್ದಿಲ್ಲದೇ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದಾರೆ. ಚಿತ್ರರಂಗಕ್ಕೂ ಗುಡ್‍ಬೈ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ವೇಳೆ ರಮ್ಯಾ ಈ ಮಾತುಗಳನ್ನು ಹೇಳಿದ್ದಾರೆ. ನಟನೆ ಅನ್ನೋ ನನ್ನ ಹಡಗು ಮುಳುಗಿ ಬಹಳ ವರ್ಷವಾಗಿದೆ. ನನಗೆ ನಟಿಸಲು ಆಸಕ್ತಿಯೂ ಇಲ್ಲ. ರಾಜಕೀಯದಲ್ಲಿಯೂ ನನ್ನ ಟೈಂ ಮುಗೀತು ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.
ಭಾನುವಾರಕ್ಕೆ ತಮ್ಮ ಮೊದಲ ಸಿನಿಮಾ ಅಭಿ ಸಿನಿಮಾ ತೆರೆಕಂಡು 18 ವರ್ಷವಾದ ಹಿನ್ನೆಲೆ ಅಭಿಮಾನಿಗಳ ಜೊತೆ ರಮ್ಯಾ ಸಂವಾದ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ರಾಜಕೀಯ ಮತ್ತು ಸಿನಿಮಾದಿಂದ ತುಂಬಾ ದೂರ ಹೋಗಿರುವ ಮಾತುಗಳನ್ನಾಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಮ್ಯಾ ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಕೆಲ ವಿಷಯಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.
ರಮ್ಯಾ ಅವರ ಮಾತು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದು, ಮತ್ತೆ ಚಂದನವನಕ್ಕೆ ಹಿಂದಿರುಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಂದಿಗೂ ಅದೇ ಬೇಡಿಕೆ ಹೊಂದಿರುವ ರಮ್ಯಾ ಅವರ ಡೇಟ್ ಗಾಗಿ ಅದೆಷ್ಟೋ ನಿರ್ದೇಶಕರು ಕಾಯುತ್ತಿರೋದು ಮಾತ್ರ ನಿಜ.