ಸಮುದ್ರದಲ್ಲಿ ಸಿಕ್ತು ಕೋಟಿ ಬೆಲೆಬಾಳುವ ತಿಮಿಂಗಿಲ ವಾಂತಿ!

Public TV
3 Min Read
Ambergris

ಕಾರವಾರ: ಕೋಟ್ಯಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ‘ತಿಮಿಂಗಿಲದ ವಾಂತಿ’ಯ (ಅಂಬೇರ್ಗ್ರಿಸ್) ಸುಮಾರು ಒಂದು ಕೆ.ಜಿ. ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಮುರುಡೇಶ್ವರದ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಅವರಿಗೆ ಕಡಲತೀರದಲ್ಲಿ ತೆರಳುವಾಗ ತಿಮಿಂಗಿಲದ ವಾಂತಿ ಕಂಡಿದ್ದು ಕಲ್ಲಿನಾಕಾರದಲ್ಲಿತ್ತು. ಇದನ್ನು ಮನೆಗೆ ತಂದು ತಿಳಿದವರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದ್ದು, ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ ಎಂದು ತಿಳಿದಿದ್ದಾರೆ. ನಂತರ ನಮ್ಮ ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದ ಅವರು, ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ್ ರವರಿಗೆ ಹಸ್ತಾಂತರಿಸಿದ್ದಾರೆ.

vlcsnap 2021 04 24 20h48m56s417 e1619277618230

ಏನಿದು ತಿಮಿಂಗಿಳದ ವಾಂತಿ? ವಿಶೇಷ ಏನು?
ಅಂಬೇರ್ಗ್ರಿಸ್ ಎಂದು ಇಂಗ್ಲೀಷ್ ನಲ್ಲಿ ಹೇಳುವ ಹಾಗೂ ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದರೆ ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೇರ್ಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ.

ಈ ಕುರಿತು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದ್ದು, ಎಲ್ಲ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು. ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೇರ್ಗ್ರಿಸ್ ಹೊರ ಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ.

vlcsnap 2021 04 24 20h49m01s548 e1619277658663

ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೇ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರ ಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ. ಮೀನಿನ ಮೂಳೆಗಳು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ ಎಂದು ವಿವರಿಸಿದರು.

ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರುತ್ತದೆ. ತಿಮಿಂಗಿಲ ಹೊರಹಾಕಿದ ವಾಂತಿಯು ಮೊದಲು ಭಾರವಾಗಿದ್ದು, ನಂತರ ಸಮುದ್ರದಲ್ಲಿ ರಾಸಾಯನಿಕ ಪ್ರಕ್ರಿಯೆಯಲ್ಲಿ ಗಟ್ಟಿಯಾಗಿ, ನಿಧಾನ ಗತಿಯಲ್ಲಿ ನೀರಿನಲ್ಲಿ ತೇಲುತ್ತದೆ. ಕೆಲವೊಮ್ಮೆ ಪ್ರಖರ ಬಿಸಿಲಿಗೆ ಕರಗುವ ಸಾಧ್ಯತೆಯೂ ಇರುತ್ತದೆ. ಒಂದು ವೇಳೆ ತಿಮಿಂಗಿಲ ಮೀನುಗಳನ್ನು ತಿಂದ ಒಂದೆರಡು ವಾರಗಳಲ್ಲೇ ಎಲುಬುಗಳನ್ನು ಹೊರ ಹಾಕಿದರೆ ಅದು ಅಸಹನೀಯ ವಾಸನೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.

sperm whale

ಕೋಟಿ ಬೆಲೆ ಏಕೆ?
ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತವೆ. ಒಂದು ತಿಮಿಂಗಿಲ ಒಂದು ಕೆ.ಜಿ. ಇಂದ ಹತ್ತು ಕೆ.ಜಿ.ಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗದಲ್ಲಿ ಇವು ರಾಸಾಯನಿಕಕ್ಕೆ ಒಳಗಾಗುವುದರಿಂದ ಇದರ ವಾಂತಿ ಯಲ್ಲಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್ ನಂತೆ ಕರಗಿ ಕೆಟ್ಟ ವಾಸನೆ ಬರುತ್ತದೆ. ಆದರೆ ನಂತರ ಸುಂಗಂಧಭರಿತವಾಗಿರುತ್ತದೆ.

sperm whale 2

ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಇದಕ್ಕೆ ಅತೀ ಬೇಡಿಕೆ ಇದೆ. ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಇದಕ್ಕೆ ಒಂದು ಕೆ.ಜಿ.ಗೆ ಕೋಟಿ ಬೆಲೆ ಇರುತ್ತದೆ. ಹೀಗಾಗಿ ವೇಲ್ ಗಳ ಮಾರಣ ಹೋಮ ಸಹ ನಡೆಯುತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಬ್ಲ್ಯೂಡಬ್ಲ್ಯೂಎಫ್ ಹಾಗೂ ನಮ್ಮ ದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು, ಮಾರುವುದು ಕಾನೂನು ಬಾಹಿರ, ಶಿಕ್ಷಾರ್ಹ ಅಪರಾಧವಾಗಿದೆ. ಹಲವು ದೇಶಗಳಲ್ಲಿ ಇವುಗಳ ಮಾರಾಟ, ಆಮದಿಗೆ ಅನುಮತಿ ಇದೆ. ಹೀಗಾಗಿ ಇದರ ಮೌಲ್ಯ ಹೆಚ್ಚು ಪಡೆದುಕೊಂಡಿದ್ದು, ಕಳ್ಳಹಾದಿಯಲ್ಲಿ ಸಹ ಮಾರಾಟವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *