ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ವೇದಾ ತಾಯಿ ಚೆಲುವಾಂಬ ಅವರಿಗೆ 67 ವರ್ಷ ವಯಸ್ಸಾಗಿತ್ತು.
ನಾಲ್ಕು ದಿನಗಳ ಹಿಂದೆ ಏಪ್ರಿಲ್ 20ರಿಂದು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ದರು. ಕೊರೊನಾ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಕಳೆದ ನಾಲ್ಕು ದಿನಗಳಿಂದ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಲುವಾಂಬ ಅವರಿಗೆ ಕಳೆದ ರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನ ಕಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಚೆಲುವಾಂಬ ಅವರ ಮೃತದೇಹವನ್ನ ಮನೆಯವರು ತಮ್ಮ ವಶಕ್ಕೆ ನೀಡುವಂತೆ ಕೇಳಿದ್ದರು. ಆದರೆ ತಾಲೂಕು ಆಡಳಿತ ಕೊರೊನಾದಿಂದ ಸಾವನ್ನಪ್ಪಿರೋ ಕಾರಣ ಮೃತದೇಹವನ್ನ ನೀಡೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಮೃತ ಚೆಲುವಾಂಬ ಮನೆಯವರು ಎಲ್ಲಿ ಹೇಳುತ್ತಾರೋ ಅಲ್ಲೇ ತಾಲೂಕು ಆಡಳಿತದ ವತಿಯಿಂದಲೇ ಕೊರೊನಾ ಗೈಡ್ ಲೈನ್ ಮೂಲಕವೇ ಅಂತ್ಯ ಸಂಸ್ಕಾರ ನಡೆಸೋದಕ್ಕೆ ತಾಲೂಕು ಆಡಳಿತ ಸಜ್ಜಾಗಿದ್ದಾರೆ. ಆ ಹಿನ್ನೆಲೆ ಕಡೂರು ತಾಲೂಕಿನ ಬೀರೂರು ರಸ್ತೆಯಲ್ಲಿ ವೇಧಾ ಅವರ ಜಮೀನಿನಲ್ಲೇ ತಾಲೂಕು ಆಡಳಿತದ ವತಿಯಿಂದ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಕ್ರಿಕೆಟರ್ ವೇಧಾ ತಂದೆ ಕೃಷ್ಣಮೂರ್ತಿ ಕೇಬಲ್ ಆಪರೇಟರ್ ಆಗಿದ್ದು, ನಿವೃತ್ತ ಸೈನಿಕ ಕೂಡ. ವೇಧಾಗೆ ಅಕ್ಕ ಹಾಗೂ ತಮ್ಮನಿದ್ದಾನೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇಧಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದವರು.