– 1 ವಾರದಲ್ಲಿ 20 ಮಂದಿಗರ ಸೋಂಕು
– ಸೋಂಕಿತರಿಗಾಗಿ ತೀವ್ರ ಶೋಧ
ಕೋಲಾರ: ಗಡಿ ಜಿಲ್ಲೆ ಕೋಲಾರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಪರಿಣಾಮ ಕೋಲಾರ ಜಿಲ್ಲೆಯ ಎರಡು ಗ್ರಾಮಗಳು ಸಂಪೂರ್ಣವಾಗಿ ಸೀಲ್ ಡೌನ್ ಆಗಿವೆ.
ಗ್ರಾಮಕ್ಕೆ ಗ್ರಾಮವನ್ನ ಸೀಲ್ ಡೌನ್ ಮಾಡಿರುವ ಅಧಿಕಾರಿಗಳು, ಮತ್ತೊಂದೆಡೆ ಗ್ರಾಮದಲ್ಲಿ ಸೋಂಕಿತರ ಹುಡುಕಾಟದಲ್ಲಿರುವ ಅಧಿಕಾರಿಗಳು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯಲ್ಲಿ. ಕೋಲಾರ ತಾಲ್ಲೂಕಿನ ಲಕ್ಷ್ಮೀ ಸಾಗರ ಹಾಗೂ ಬಂಗಾರಪೇಟೆ ತಾಲ್ಲೂಕಿನ ಪಾಕರಹಳ್ಳಿಯಲ್ಲಿ ಕೊರೊನಾ ರೌದ್ರ ನರ್ತನ ನಡೆಯುತ್ತಿದೆ.
ಕಳೆದೊಂದು ವಾರದಿಂದ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ರೆ, 5 ಜನರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದಾರೆ.
ಕಳೆದ 2 ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಆರೋಗ್ಯ ಕಾರ್ಯಕರ್ತರು ಗ್ರಾಮದಲ್ಲಿ ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಮತ್ತಷ್ಟು ಜನರು ಸೋಂಕಿತರಿದ್ದರೂ ಚಿಕಿತ್ಸೆಗೆ ಹಾಗೂ ಅಧಿಕಾರಿಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಕೋಲಾರದ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುವ ಯುವಕನಿಂದ ಗ್ರಾಮಕ್ಕೆ ಕೊರೊನಾ ಕಂಟಕ ಎದುರಾಗಿದ್ದು, ಇದುವರೆಗೂ 20ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ.
ಅರೋಗ್ಯ ಇಲಾಖೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಗ್ರಾಮದ ಜನರ ಗಂಟಲು ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಅಲ್ಲದೆ ಲಕ್ಷ್ಮೀ ಸಾಗರ ಗ್ರಾಮದಲ್ಲಿ 30 ಇದ್ದ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಪಾಕರಹಳ್ಳಿ ಹಾಗೂ ಲಕ್ಷ್ಮೀ ಸಾಗರದಲ್ಲಿ ಗ್ರಾಮಗಳನ್ನ ಸೀಲ್ ಡೌನ್ ಮಾಡಲಾಗಿದ್ದು ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.