ಸಖತ್ ಸೌಂಡ್ ಮಾಡ್ತಿದೆ ಪಲ್ಲವಿ ರಾಜು ನಟನೆಯ ಭಾವಗೀತೆ

Public TV
2 Min Read
Pallavi Raju

– ಡಿ ಗ್ಲಾಮರ್ ಲುಕ್ ನಲ್ಲಿ ಕಣ್ಮನ ಸೆಳೆದ ಬ್ಯೂಟಿ

ಲ್ಲವಿ ರಾಜು ಸದ್ಯಕ್ಕೆ ಗಾಂಧಿನಗರದಲ್ಲಿ ಈ ಹೆಸರು ಜೋರಾಗಿ ಓಡುತ್ತಿದೆ. ಅದಕ್ಕೆ ಕಾರಣವಾಗಿರೋದು ಪಲ್ಲವಿ ನಟನೆಯ ಚೆಂದದ ಭಾವಗೀತೆ. ಸತ್ಯನಂದ ಅವರ ಲಿರಿಕ್ಸ್ ಸಿ.ಅಶ್ವತ್ಥ್ ಅವರ ಮ್ಯೂಸಿಕ್ ಅರ್ಜುನ್ ಕೃಷ್ಣ ಅವರ ನಿರ್ದೇಶನ, ರಾಜು ಅನಂತಸ್ವಾಮಿ ಅವರ ಕಂಠ ಸಿರಿಯಲ್ಲಿ ಬಂದ ಬಡವನಾದರೇ ಏನು ಪ್ರಿಯೆ ಭಾವಗೀತೆಯಲ್ಲಿ ಪಲ್ಲವಿ ರಾಜು ನಟನೆ ಎಲ್ಲರ ಗಮನ ಸೆಳೆಯುತ್ತಿದೆ.

ಪಕ್ಕ ಹಳ್ಳಿ ಲುಕ್ ನಲ್ಲಿ, ತುಂಬು ಗರ್ಭಿಣಿಯಾಗಿ, ಡಿ ಗ್ಲಾಮರ್ ರೋಲ್ ನಟಿಸಿರುವ ಪಲ್ಲವಿ ನಟನೆಗೆ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರ್ಥಪೂರ್ಣ ಪದಗಳನ್ನು ಪೋಣಿಸಿ, ಸುಂದರ ಜಾಗದಲ್ಲಿ ಚಿತ್ರೀಕರಿಸಿರುವ ಹಾಡು ಎಷ್ಟು ಅದ್ಭುತವಾಗಿ ಮೂಡಿ ಬಂದಿದೆಯೋ ಅದೇ ರೀತಿ ಪಲ್ಲವಿ ರಾಜು ನಟನೆ ಕೂಡ ಅಷ್ಟೇ ಮನಮೋಹಕವಾಗಿದೆ.

Pallavi Raju 2

ಅಷ್ಟಕ್ಕೂ ಪಲ್ಲವಿ ರಾಜು ಇಂತಹ ಅದ್ಭುತ ನಟನೆ ಕಾರಣ ಅವರ ಸಿನಿಯಾನದ ಬದುಕಿನ ಅನುಭವಗಳು. ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಪಲ್ಲವಿ, ಆ ಬಳಿಕ ಹೆಜ್ಜೆ ಹಾಕಿದ್ದು ಗಾಂಧಿನಗರದತ್ತ. ಮಂತ್ರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ ಪಲ್ಲವಿಗೆ ಆ ಬಳಿಕ ಹೊಸ ಹೊಸ ಸಿನಿಮಾಗಳ ಅವಕಾಶ ಹುಡುಕಿಕೊಂಡು ಬಂದವು.

ಪಲ್ಲವಿ ಇಂದು ತೆರೆಮೇಲೆ ಬಣ್ಣ ಹಚ್ಚಿ ಮಿಂಚುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಮೂಲತಃ ಸಿಲಿಕಾನ್ ಸಿಟಿ ಬೆಂಗಳೂರಿನವರಾದ ಪಲ್ಲವಿ ನಟನೆಯಲ್ಲಿ ವಿಪರೀತಿ ಆಸಕ್ತಿ ಇಟ್ಟುಕೊಂಡಿದ್ದವರು. ಹೀಗಾಗಿ ನಾಟಕ ತಂಡ ಸೇರಿ ನಟನೆ ಕಲಿತರು. ಆ ಬಳಿಕ ನಾಟಕಗಳಲ್ಲಿ ನಟಿಸುತ್ತಾ ರಂಗಭೂಮಿ ಕಲಾವಿದೆಯಾಗಿ, ನಟಿಯಾಗಿ ರೂಪಗೊಂಡ ನಂತರ ಕೆಲವೊಂದಿಷ್ಟು ಕಿರುಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕನ್ನಡದ ಜೊತೆ ತಮಿಳು ಕಿರುಚಿತ್ರದಲ್ಲಿಯೂ ಪಲ್ಲವಿ ಅಭಿನಯಿಸಿದ್ದಾರೆ.

Pallavi Raju 1

ಹೀಗೆ ಶುರುವಾದ ಪಲ್ಲವಿ ಸಿನಿಬದುಕು ಬಂದು ನಿಂತಿದ್ದು, ಹೊಸಬರ ಸಿನಿಮಾ ಗುಲ್ಟು ತಂಡದ ಬಳಿ. ಗುಲ್ಟು ಸಿನಿಮಾದಲ್ಲಿ ನಟಿಸಿದ ಬಳಿಕ ಈ ಚೆಲುವೆ ಮತ್ತಷ್ಟು ಖ್ಯಾತಿ ಪಡೆದರು. ಆ ಬಳಿಕ ರತ್ನಮಂಜರಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ಪಲ್ಲವಿ ಭತ್ತಳಿಕೆಯಲ್ಲಿ ಮೂರ್ನಾಲ್ಕು ಸಿನಿಮಾ ರಿಲೀಸ್ ಗೆ ರೆಡಿಯಾಗಿವೆ. ಉತ್ತಮರು, ನಿಕ್ಸನ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.

ಈ ಸಿನಿಮಾಗಳ ಜೊತೆ ಮತ್ತಷ್ಟು ಸಿನಿಮಾ ಕಥೆ ಕೇಳಿ ಎಕ್ಸೈಟ್ ಆಗಿರುವ ಪಲ್ಲವಿ ಸದ್ಯದಲ್ಲಿಯೇ ಹೊಸ ಸಿನಿಮಾದ ಬಗ್ಗೆ ಅಪ್ ಡೇಟ್ ಕೊಡಲಿದ್ದಾರೆ. ಪ್ರತಿ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳನ್ನೇ ನಟಿಸುತ್ತಿರುವ ಪಲ್ಲವಿ ಗ್ಲಾಮರ್ ಗೂ ಸೈ…ಡಿ ಗ್ಲಾಮರ್ ಗೂ ಜೈ ಎನ್ನುವ ಪ್ರತಿಭೆ. ಪ್ರತಿಭೆ ಜೊತೆ ಅದೃಷ್ಟ ಎರಡು ಪಲ್ಲವಿಗಿದೆ. ಹೀಗಾಗಿ ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆ ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *