ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಂದು ನಗರದ ಬಹುತೇಕ ಕಡೆಗಳಲ್ಲಿ ಪೊಲೀಸರು ಫೀಲ್ಡ್ ಗೆ ಇಳಿದಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಬಿಸಿ ಮುಟ್ಟಿಸಿದ್ದಾರೆ.
ಈ ಹಿಂದೆ ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಪಾಲಿಸದವರಿಗೆ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಆದರೂ ಜನ ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ನಮಗೆ ಕೊರೊನಾ ಬರುವುದಿಲ್ಲ ಎಂಬಂತೆ ವರ್ತಿಸುತ್ತಿದ್ದರು. ಹೀಗಾಗಿಯೇ ಇಂದು ನಗರದ ಬಸ್ ನಿಲ್ದಾಣ, ಗೋಪಿ ವೃತ್ತ, ಶಿವಪ್ಪನಾಯಕ ವೃತ್ತ, ಶಿವಮೂರ್ತಿ ವೃತ್ತ ಹಾಗೂ ಉಷಾ ನರ್ಸಿಂಗ್ ಹೋಮ್ ವೃತ್ತ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ, ಮಾಸ್ಕ್ ಧರಿಸದವರಿಗೆ ಪೊಲೀಸರು ಭರ್ಜರಿ ದಂಡ ವಿಧಿಸಿದ್ದಾರೆ.
ದಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರ ಮುಂದೆ ಸಾರ್ವಜನಿಕರು ತರಹೇವಾರಿ ಕಾರಣಗಳನ್ನು ಹೇಳಿದ್ದಾರೆ. ಆದರೂ ಯಾವುದನ್ನೂ ಕೇಳದ ಪೊಲೀಸರು, ದಂಡದ ರಶೀದಿ ಹರಿದು ಕೈಗೆ ಇಟ್ಟಿದ್ದಾರೆ. ಕೆಲವರು ಮಾಸ್ಕ್ ನ್ನು ಜೇಬಿನಲ್ಲಿಟ್ಟುಕೊಂಡು ಪೊಲೀಸರಿಗೆ ದಂಡ ಕಟ್ಟಿದ್ದ ಪ್ರಸಂಗ ಸಹ ನಡೆದಿದೆ.
ಇಂದು ಮಾಸ್ಕ್ ಧರಿಸದೇ ದಂಡ ಕಟ್ಟಿದವರಲ್ಲಿ ಬಹುತೇಕ ಮಂದಿ ಸರ್ಕಾರಿ ನೌಕರರೇ ಇದ್ದರು ಎನ್ನಲಾಗಿದೆ. ಕೆಲವು ಸಾರ್ವಜನಿಕರು ದಂಡ ಕಟ್ಟುವ ವೇಳೆ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಾಸ್ಕ್ ಧರಿಸದ ರಾಜಕಾರಣಿಗಳಿಗೂ ಇದೇ ರೀತಿ ದಂಡ ಕಟ್ಟಿಸುತ್ತೀರಾ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಕೇವಲ ಒಂದು ಗಂಟೆಯಲ್ಲಿ 300ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡಿದ್ದಾರೆ.