ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

Public TV
1 Min Read
Mallalli Falls

ಮಡಿಕೇರಿ: ವಾರಂತ್ಯವಾಗಿದ ಹಿನ್ನೆಲೆ ಜಲಪಾತದ ವೀಕ್ಷಣೆಗೆ ತೆರಳಿದ್ದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ನಡೆದಿದೆ.

Mallalli Falls 3

ದಿವ್ಯಾ ಮತ್ತು ಶಶಿಕುಮಾರ್ ಮೃತದುರ್ದೈವಿಗಳು. ಇಂದು ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಆರು ಜನರ ತಂಡ ಜಲಪಾತಕ್ಕೆ ಪ್ರವಾಸಕ್ಕೆ ಹೋಗಿದ್ದರು. ಹತ್ತಿರದಿಂದ ಜಲಪಾತದ ವೀಕ್ಷಣೆ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ನೀರಿನ ಸೆಳೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದ ಸದಸ್ಯರ ಅಕ್ರಂದನ ಮಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

Mallalli Falls 4

ಮಲ್ಲಳ್ಳಿ ಜಲಪಾತ ಎಷ್ಟು ನೈಸರ್ಗಿಕ ಸೊಬಗು ಹೊಂದಿದೆಯೋ ಅಷ್ಟೇ ಅಪಾಯವನ್ನು ಕೂಡ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ತನ್ನ ಮಡಿಲಿನವರೆಗೆ ನೋಡುಗರನ್ನು ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಜಲಪಾತ ಎಂಬ ಹೆಗ್ಗಳಿಕೆ ಮಲ್ಲಳ್ಳಿ ಫಾಲ್ಸ್ ಗೆ ಇದೆ. ಈ ಜಲಪಾತದ ಆಳ ನುರಿತ ಈಜು ತಜ್ಞರು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾತ್ರವೆ ಅರಿವಿದೆ.

Mallalli Falls 5

ಹೊರ ಊರುಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನೀರಿನಲ್ಲಿ ಈಜಾಡಿ ಅನುಭವ ಇದ್ದರೂ ಕೂಡ, ಮಲ್ಲಳ್ಳಿ ಜಲಪಾತದಲ್ಲಿ ಈ ಅನುಭವ ಕೆಲಸಕ್ಕೆ ಬರೋದಿಲ್ಲ. ಹೀಗಾಗಿಯೇ ಮಲ್ಲಳ್ಳಿ ಜಲಪಾತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಫೋಟೋ ತೆಗೆಯಲು ಹೋದ 6 ಮಂದಿ ದುರ್ಮರಣ

Mallalli Falls 1

ಜಲಪಾತಕ್ಕೆ ಪ್ರವೇಶಿಸುವ ಮೇಲ್ಭಾಗದ ಮೆಟ್ಟಿಲಿನಲ್ಲೇ ಜಲಪಾತದ ಅಪಾಯ, ಇಲ್ಲಿಯವರೆಗೆ ಜೀವತೆತ್ತವರ ಸಂಖ್ಯೆಯ ಕುರಿತು ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಜಲಪಾತಕ್ಕೆ ಇಳಿಯದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಮೋಜುಮಸ್ತಿಯ ಗುಂಗಿನಲ್ಲಿ ಇಲ್ಲಿಗೆ ಬರುವ ಯುವ ಪ್ರವಾಸಿಗರು, ಎಚ್ಚರಿಕೆಯ ಫಲಕಗಳನ್ನು ನಿರ್ಲಕ್ಷಿಸಿ ನೀರಿಗೆ ಇಳಿದು ಅಪಾಯವನ್ನು ಮೈಮೇಲೆ ತಂದುಕೊಳ್ಳುತ್ತಿದ್ದಾರೆ ಎಂದು ಅಲ್ಲಿ ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *