– ಆದೇಶ ವಾಪಾಸ್ ಪಡೆಯುವಂತೆ ಆಗ್ರಹ
ಉಡುಪಿ: ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂಬ ಆದೇಶವನ್ನು ತಕ್ಷಣ ವಾಪಸ್ ಪಡೆಯಿರಿ. ರಾಜಕೀಯ ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ, ಧಾರ್ಮಿಕ ಕಾರ್ಯಕ್ರಮಗಳ ಅನಿವಾರ್ಯತೆಯಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರ್ಯಕ್ರಮಗಳಿಗೆ ನೂರು ಜನ ಭಾಗವಹಿಸುವ ಅವಕಾಶ ಕೊಟ್ಟಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಕಾರ್ಯಕ್ರಮ ಅನಿವಾರ್ಯ ಇಲ್ಲ. ನಮ್ಮ ಜಿಲ್ಲೆಯ ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಜನರ ಭಾವನೆಗಳಿಗೆ ಅಡ್ಡಿ ಮಾಡದೆ ತಕ್ಷಣ ಆದೇಶ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಧಾರ್ಮಿಕ ಕೇಂದ್ರಗಳೇ ಹೆಚ್ಚು. ಸಿಎಂ, ಆರೋಗ್ಯ ಸಚಿವ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಜನ ಕಂಕಣ ಬದ್ಧರಾಗಿದ್ದಾರೆ. ಮುಹೂರ್ತ ನಿಗದಿಯಾಗಿದೆ. ಎಲ್ಲಾ ಸಿದ್ಧತೆಗಳು ನಡೆದಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಾನೊಬ್ಬ ಆಡಳಿತ ಪಕ್ಷದ ಸದಸ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವುದು ಜನಪ್ರಿಯ ಸರಕಾರದ ಲಕ್ಷಣವಲ್ಲ ಎಂದು ಹೇಳಿದರು.
ಕೋವಿಡ್ ನಿಯಮಾವಳಿಗಳನ್ನು ರೂಪಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಭಾಗವಹಿಸುವ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಿ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯ. ಜನಸಂದಣಿ ಗೆ ನಿಯಂತ್ರಣ ಹೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಹಿಂದುಳಿದ ಜನಾಂಗದವರೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದುಡಿಯುತ್ತಾರೆ. ಎರಡು ಮೂರು ತಿಂಗಳು ದುಡಿದು ಒಂದು ವರ್ಷದಿಂದ ಮಾಡುತ್ತಾರೆ. ಬಡ ಜನರಿಗೆ ಇದರಿಂದ ಆರ್ಥಿಕ ಹೊಡೆತ ಬೀಳುತ್ತದೆ. ಕರಾವಳಿಯ ಜೀವನಪದ್ಧತಿಯನ್ನು ಅರ್ಥಮಾಡಿಕೊಳ್ಳಿ. ಉಡುಪಿ ನಗರಕ್ಕೆ ನೈಟ್ ಕಪ್ರ್ಯೂ ನ ಅಗತ್ಯವೂ ಇಲ್ಲ. ಕೊರೋನ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರ ಅಲ್ಲ ಎಂದರು.