ಕೋಲ್ಕತ್ತಾ: ಕೂಚ್‍ಬಿಹಾರ ಜಿಲ್ಲೆಯ ಸೀತಾಲ್‍ಕುಚಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರಿಗೆ 48 ಗಂಟೆ ಪ್ರಚಾರ ಸಭೆಗಳಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ಆದೇಶಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಸೀತಾಲ್‍ಕುಚಿಯಲ್ಲಿ ಗಲಭೆ ನಡೆದಿತ್ತು. ಈ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಸಿಬ್ಬಂದಿ ಪ್ರಾಣ ರಕ್ಷಣೆಗೆ ಹಾರಿಸಿದ ಗುಂಡಿನಿಂದ ಐದು ಮಂದಿ ಮೃತಪಟ್ಟಿದ್ದರು.
ಹಬ್ರಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಿನ್ಹಾ, ಕ್ಷೇತ್ರದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಸೀತಾಲ್‍ಕುಚಿ ಗಲಭೆ ವಿಚಾರ ಪ್ರಸ್ತಾಪಿಸಿದ್ದರು. ಈ ವೇಳೆ ಅವರು, ನಾಲ್ಕು ಮಂದಿಯಲ್ಲ, ಕೇಂದ್ರ ಪಡೆಗಳು ಕೂಚ್‍ಬಿಹಾರದ ಸೀತಾಲ್‍ಕುಚಿಯಲ್ಲಿ ಎಂಟು ಜನರಿಗೆ ಗುಂಡು ಹಾರಿಸಬೇಕಿತ್ತು ಎಂದಿದ್ದರು. ಹೀಗಾಗಿ ಅವರ ವಿರುದ್ಧ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಇದೇ ರೀತಿ ನಿಷೇಧ ಹೇರಲಾಗಿದೆ. ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾಪಡೆಗಳ ವಿರುದ್ಧ ಮಮತಾ ಅವರು ನೀಡಿರುವ ಹೇಳಿಕೆಗಳು ರಾಜ್ಯದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಹೀಗಾಗಿ ಅವರ ಪ್ರಚಾರದ ಮೇಲೆ ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಇಂದು ರಾತ್ರಿ 8 ಗಂಟೆಯ ವರೆಗೆ ನಿಷೇಧ ವಿಧಿಸಲಾಗಿದೆ.
ಸಿನ್ಹಾ ಮಾತ್ರವಲ್ಲದೆ ಗಲಭೆ ಸಂಬಂಧ ಇಂತಹುದೇ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕರಾದ ದಿಲೀಪ್ ಘೋಷ್ ಮತ್ತು ಸಯಂತನ್ ಬಸು ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.