ನವದೆಹಲಿ: ಭಾರತದಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಇದೀಗ ಸುಪ್ರೀಂಕೋರ್ಟ್ ಸಿಬ್ಬಂದಿಯನ್ನೂ ಬಿಟ್ಟಿಲ್ಲ. ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಶೇ.50ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ.
ಇದೀಗ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳನ್ನು ಮನೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ. ಅಲ್ಲದೇ ಕೋರ್ಟ್ ಆವರಣ ಹಾಗೂ ಕೋರ್ಟ್ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.
ಶನಿವಾರ ಪರೀಕ್ಷೆಗೆ ಒಳಗಾದ 90 ಸಿಬ್ಬಂದಿಯಲ್ಲಿ 44 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಕೆಲವು ನ್ಯಾಯಾಧೀಶರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ ಈ ಬಗ್ಗೆ ಆತಂಕಗೊಳ್ಳುವ ಅಗತ್ಯವೇನಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಸಿಬ್ಬಂದಿ ಹಾಗೂ ಕಾನೂನು ಗುಮಾಸ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿಂದೆ ಕೆಲವು ನ್ಯಾಯಾಧೀಶರಿಗೂ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದೀಗ ಚೇತರಿಸಿಕೊಂಡಿದ್ದಾರೆ ಎಂದು ನ್ಯಾಯಾಧೀಶರೊಬ್ಬರು ಪ್ರತಿಕ್ರಿಯಿಸಿದ್ದಾರೆ.