ಇಸ್ಲಾಮಬಾದ್: ಹಿಂದೂ ದೇವಾಲಯಗಳ ಮರು ನಿರ್ಮಾಣಕ್ಕಾಗಿ 3.48 ಕೋಟಿ ರೂಪಾಯಿಗಳನ್ನು ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ಬಿಡುಗಡೆ ಮಾಡಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೆಲವು ಸ್ಥಳೀಯ ಸಂಘಟನೆಗಳ ಗುಂಪಿನಿಂದ ದೇವಾಲಯಗಳು ಹಾನಿಗೊಳಗಾಗಿದ್ದವು. ಖೈಬರ್ ಪಕ್ತುನ್ಖ್ವಾ ಕರಾಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಪರಮಹಂಸಜೀ ಮಹಾರಾಜ್ ಅವರ ಸಮಾಧಿಯನ್ನು ಧ್ವಂಸ ಮಾಡಲಾಗಿತ್ತು.
ಶತಮಾನಗಳಷ್ಟು ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ಸಮಾಧಿ ಮೇಲೆ ನಡೆದ ದಾಳಿಗೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೇವಾಯಲಯ ಪುನರ್ ನಿರ್ಮಾಣ ಮಾಡಬೇಕೆಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ದೇಗುಲ ನಿರ್ಮಾಣ ಶೀಘ್ರವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ದೇವಾಲಯ ಮರು ನಿರ್ಮಾಣ ಕಾರ್ಯಕ್ಕಾಗಿ ಔಕಾಫ್ ಇಲಾಖೆಗೆ 3,48,29,000 ಹಣವನ್ನು ನೀಡಿದೆ ಎಂದು ತಿಳಿದು ಬಂದಿದೆ.