ಬೇರೆ ಯಾರ ಮಾತಿಗೂ ಕಿವಿಗೊಡಬೇಡಿ, ಮುಷ್ಕರ ಕೈಬಿಡಿ: ಸಚಿವ ಸುಧಾಕರ್

Public TV
2 Min Read
SUDHAKAR 6

– ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸಿರುವ ರೀತಿಯನ್ನು ಗಮನಿಸಿ

ಬೆಂಗಳೂರು: ಸಾರಿಗೆ ನೌಕರರು ಯಾರದ್ದೋ ಮಾತಿಗೆ ಕಿವಿಗೊಡದೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಮುಷ್ಕರವನ್ನು ಕೈಬಿಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೌಕರರಿಗೆ ಮನವಿ ಮಾಡಿದ್ದಾರೆ.

KSRTC

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ಒಂದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಈ ರೀತಿ ನೌಕರರಿಗೆ ಸ್ಪಂದಿಸಿರುವುದನ್ನು ಗಮನಿಸಿ ಮುಷ್ಕರ ಕೈ ಬಿಡಬೇಕು ಎಂದು ಹೇಳಿದ್ದಾರೆ.

BUS PAND

ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳಾಗಿದ್ದು, ಸಾರ್ವಜನಿಕ ಸೇವೆಗಾಗಿ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ನೌಕರರ ಪರಸ್ಪರ ಕೊಡುಕೊಳ್ಳುವಿಕೆಗಳಿಂದಾಗಿ ರಾಜ್ಯದ ಜನತೆಗೆ ಉತ್ತಮ ರಸ್ತೆ ಸಾರಿಗೆ ಸೇವೆ ಒದಗಿಸಲಾಗುತ್ತಿದೆ. ಕಾಲಕಾಲಕ್ಕೆ ಯಡಿಯೂರಪ್ಪನವರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟವಾದಾಗಲೂ ನೌಕರರು ಬದುಕು, ಅವರ ಕುಟುಂಬದ ಹಿತಕ್ಕಾಗಿ ಒಟ್ಟು 1,953.45 ಕೋಟಿ ರೂಪಾಯಿಗಳಷ್ಟು ವೇತನವನ್ನು ಪಾವತಿಸಲಾಗಿದೆ. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಸರ್ಕಾರದನೌಕರರ ಹಿತ ಕ್ರಮವನ್ನು ಪರಿಗಣಿಸಿ ನೌಕರರು ಮುಷ್ಕರ ಬಿಟ್ಟು, ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

2020ರ ಡಿಸೆಂಬರ್‍ನಲ್ಲಿ ನೌಕರರು 4 ದಿನಗಳ ಕಾಲ ಮುಷ್ಕರ ಮಾಡಿದ್ದರು. ಆ ಸಮಯದಲ್ಲಿ 10 ಬೇಡಿಕೆಗಳಲ್ಲಿ, 9 ಬೇಡಿಕೆ ಈಡೇರಿಸುವುದಾಗಿ ಸರ್ಕಾರವು ಸಾರಿಗೆ ನೌಕರರಿಗೆ ಭರವಸೆ ನೀಡಿತ್ತು. ನಂತರ ಕೊಟ್ಟ ಮಾತಿನಂತೆಯೇ ನಡೆದುಕೊಂಡು ನಮ್ಮ ಸರ್ಕಾರ, 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದೆ. ಆದರೆ 6 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಬೇಕಿದೆ. ಇದಕ್ಕಾಗಿ ಸಮಿತಿ ಕೂಡ ರಚನೆ ಮಾಡಿದ್ದು, ಈ ಸಮಿತಿಯು 6 ಸಭೆಗಳನ್ನು ನಡೆಸಿ ಚರ್ಚೆ ಮಾಡಿದೆ. ಇಷ್ಟೆಲ್ಲ ಕ್ರಮ ವಹಿಸಿದ ಬಳಿಕವೂ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ. ಆದ್ದರಿಂದ ನೌಕರರು ಮುಷ್ಕರ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಚಿವರು ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *