ರಾಜ್ಯದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕ್ರಾಂತಿಗೆ ದಿನಗಣನೆ : ಅಶ್ವತ್ಥನಾರಾಯಣ

Public TV
2 Min Read
automobile ashwath naryana main

– ಜಾಗತಿಕ ತಂತ್ರಜ್ಞಾನ ಆಡಳಿತ ಶೃಂಗಸಭೆ
– ಪೆಟ್ರೋಲ್ ಬಂಕ್‍ಗಳು ಇರುವಂತೆಯೇ ಚಾರ್ಜಿಂಗ್ ಪಾಯಿಂಟ್

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರೀಕರಣ ಮಾಡುವುದು ಸೇರಿದಂತೆ ಆಡಳಿತ, ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ವಿಜ್ಞಾನ-ತಂತ್ರಜ್ಞಾನ, ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

ಜಪಾನ್ ನಲ್ಲಿ ನಡೆಯುತ್ತಿರುವ ಜಾಗತಿಕ ತಂತ್ರಜ್ಞಾನ ಆಡಳಿತ ಶೃಂಗಸಭೆಯಲ್ಲಿ ವರ್ಚುಯಲ್ ನಲ್ಲಿ ಪ್ರಧಾನ ಭಾಷಣ ಮಾಡಿದ ಅವರು; ಈಗಾಗಲೇ ಬೆಂಗಳೂರು ಮೆಟ್ರೋ ವಿದ್ಯುತ್‍ನಿಂದಲೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಎಲೆಕ್ಟ್ರೀಕರಣ ಆಗಲಿದೆ. ಜತೆಗೆ, ಸರಕಾರದ ಮಟ್ಟದಲ್ಲೂ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಬದಲು ಎಲೆಕ್ಟ್ರಿಕ್ ವಾಹನಗಳನ್ನೇ ಬಳಸಲಾಗುವುದು. ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ದಿನಗಣನೆ ಶುರುವಾಗಿದೆ ಎಂದರು.

automobile ashwathnaryana 1

ಸಾಂಪ್ರದಾಯಿಕ ಮೂಲಗಳ ಜತೆಗೆ ಅಸಂಪ್ರದಾಯಿಕ ಮೂಲಗಳಿಂದ ಕರ್ನಾಟಕ ಉತ್ತಮ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಹೀಗಾಗಿ ಕೈಗಾರಿಕೆ ಹೂಡಿಕೆಗೆ ಇದಕ್ಕಿಂತ ಉತ್ತಮ ರಾಜ್ಯ ಮತ್ತೊಂದಿಲ್ಲ. ವಿದ್ಯುತ್ ಸ್ವಾವಲಂಭನೆ ಸಾಧಿಸುವ ಮೂಲಕ ರಾಜ್ಯದ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಇನ್ನು ಕೆಲ ದಿನಗಳಲ್ಲಿಯೇ ರಾಜ್ಯದ ಉದ್ದಗಲಕ್ಕೂ ಎಲೆಕ್ಟ್ರಿಕ್ ವಾಹನಗಳೇ ರಸ್ತೆಗಳ ಮೇಲೆ ರಾರಾಜಿಸಲಿವೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ಮತ್ತು ಇಆರ್&ಡಿ ನೀತಿ:
ಹೊಸ ತಲೆಮಾರಿನ ವಾಹನಗಳಿಗೆ ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ರಾಜ್ಯ ಸರಕಾರ ಮಾಡಿದೆ. ಇಡೀ ದೇಶದಲ್ಲಿಯೇ ಮೊತ್ತ ಮೊದಲಿಗೆ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದ ರಾಜ್ಯವೆಂದರೆ ಕರ್ನಾಟಕ ಮಾತ್ರ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ಇಆರ್&ಡಿ (ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ) ನೀತಿಯನ್ನು ಜಾರಿಗೆ ತರಲಾಗಿದೆ. ಇಂಥ ನೀತಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಕರ್ನಾಟವೇ ಆಗಿದೆ ಎಂದರು.

ಇನ್ನು ಕೆಲ ದಿನಗಳಲ್ಲಿಯೇ ಎಲ್ಲೆಲ್ಲೂ ಪೆಟ್ರೋಲ್ ಬಂಕ್‍ಗಳು ಇರುವಂತೆಯೇ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಪಾಯಂಟ್‍ಗಳು ಹಾಗೂ ಬ್ಯಾಟರಿ ಬ್ಯಾಂಕ್ ಕಾಣಸಿಗಲಿವೆ. ನಮ್ಮಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್ ಸ್ವಾವಲಂಬನೆ ಇರುವುದರಿಂದ ಇದು ಸಾಧ್ಯವಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

ಕರ್ನಾಟಕವನ್ನು ದೇಶದ ಅತ್ಯುತ್ತಮ ಕೈಗಾರಿಕಾ ನೆಲೆಯಾಗಿಸುವ ನಿಟ್ಟಿನಲ್ಲಿ ಸರಕಾರ ವಿದೇಶಿ ಬಂಡವಾಳ ಹೂಡಿಕೆ, ಆವಿಷ್ಕಾರ, ತಂತ್ರಜ್ಞಾನ, ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ, ವಿವಿಧ ನೀತಿಗಳನ್ನು ಜಾರಿಗೆ ತರುವ ಮೂಲಕ ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೊಳಿಸಿದೆ. ಕೋವಿಡ್ಡೋತ್ತರ ಕಾಲದಲ್ಲಿ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರಕಾರ ಅತ್ಯಗತ್ಯವಾದ ಎಲ್ಲ ಉಪ ಕ್ರಮಗಳನ್ನು ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಮೂಲಸೌಕರ್ಯವೆಂದರೆ, ಮುಖ್ಯವಾಗಿ ವಿದ್ಯುತ್, ರಸ್ತೆ, ನೀರು ಇತ್ಯಾದಿಗಳನ್ನು ಆದ್ಯತೆಯ ಮೇರೆಗೆ ಒದಗಿಸುವುದು ಹಾಗೂ ಕೈಗಾರಿಕಾ ಪೂರಕ ವ್ಯವಸ್ಥೆ, ಹೂಡಿಕೆದಾರ ಸ್ನೇಹಿ ನೀತಿ ಇತ್ಯಾದಿಗಳ ಮೂಲಕ ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದರು ಡಿಸಿಎಂ.

ಶೃಂಗದಲ್ಲಿ ವಲ್ರ್ಡ್ ಎಕಾನಾಮಿಕ್ ಫೋರಂ ಕ್ರಿಸ್ಟೋಫ್ ವುಲ್ಫ್, ಬಿಸ್ನೆಸ್ ಎಕ್ಸ್‍ಪರ್ಟ್ ಆಂಡ್ರೆ ಆಂಡೋನಿಯನ್, ಟೆಕ್ನಾಲಜಿ ನಿಪುಣ ಯಾಶಿಫುಮಿ ಕಾಟೋ, ಲಾಜಿಸ್ಟಿಕ್ಸ್ ಪರಿಣಿತರಾದ ಮಾರಿಯಮ್ ಅಲ್-ಫೌಂಡ್ರೆ ಮುಂತಾದವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *