ಕ್ರಿಮ್ಸ್ ವೈದ್ಯಕೀಯ ವಿಜ್ಞಾನ ಕಾಲೇಜಿನ 27 ವಿದ್ಯಾರ್ಥಿಗಳಿಗೆ ಕೊರೊನಾ

Public TV
2 Min Read
kwr medical college 1

– ಲಸಿಕೆ ಪಡೆದವರಿಗೂ ಕೊರೊನಾ ಪಾಸಿಟಿವ್
– ಅಸಡ್ಡೆ ತಂದ ಕುತ್ತು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗ ಪಡೆದುಕೊಳ್ಳುತ್ತಿದೆ. ಈ ಹಿಂದೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿ ಬೆನ್ನಲ್ಲೇ ಜಿಲ್ಲೆಯ “ಕ್ರಿಮ್ಸ್ ವೈದ್ಯಕೀಯ ವಿಜ್ಞಾನ ಕಾಲೇಜು” ವಿದ್ಯಾರ್ಥಿಗಳಿಗೂ ಕೊರೊನಾ ದೃಢವಾಗಿದೆ. ಕಾರವಾರ ಮೆಡಿಕಲ್ ಕಾಲೇಜಿನ 27 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಸುಮಾರು 450 ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಪರೀಕ್ಷೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಅಂತಿಮ ಎಂಬಿಬಿಎಸ್‍ನ ಸುಮಾರು 150 ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ಮುಂದುವರಿದಿದೆ.

kwr medical college 2

ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ: ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಎರಡು ದಿನಗಳ ಹಿಂದೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ನಡೆಸಲಾಯಿತು. ಪ್ರಥಮ ಮತ್ತು ದ್ವಿತೀಯ ವರ್ಷದ 24 ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

kwr medical college

ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳಿಗೆ ರಜೆ: ಕಾಲೇಜಿನ ಉಳಿದ ಬಹುತೇಕ ವಿದ್ಯಾರ್ಥಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಈ ಪೈಕಿ ಅಂತಿಮ ಎಂಬಿಬಿಎಸ್‍ನ 150 ವಿದ್ಯಾರ್ಥಿಗಳಿಗೆ ಏ. 18ರಿಂದ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅವರನ್ನು ಉಳಿಸಿಕೊಳ್ಳಲಾಗಿದೆ. ನೆಗೆಟಿವ್ ವರದಿ ಬಂದ ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ಗಜಾನನ ನಾಯಕ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

corona virus 2

ಅಸಡ್ಡೆ ತಂದ ಕುತ್ತು: ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಲಸಿಕೆ ಪಡೆದಿರಲಿಲ್ಲ. ಅಲ್ಲದೇ ಬಿಡುವಿನ ಸಮಯದಲ್ಲಿ ಮೋಜು ಮಸ್ತಿ ಎಂದು ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಹಾಗೂ ಇತರ ಪ್ರದೇಶಗಳಿಗೆ ಈ ವಿದ್ಯಾರ್ಥಿನಿಯರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕ ಮಾಡಿದ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

covid 19

ಮೂವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದನಂತರ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಲಸಿಕೆಯ ಮೊದಲ ಡೋಸ್ ಪಡೆದಿರುವ 24 ವಿದ್ಯಾರ್ಥಿಗಳಲ್ಲೂ ಸೋಂಕು ಪತ್ತೆಯಾಗಿದೆ. ಈ ಲಸಿಕೆ ಪಡೆದ ವಿದ್ಯಾರ್ಥಿಗಳಲ್ಲಿ ಯಾವುದೇ ತರಹದ ರೋಗ ಲಕ್ಷಣವೂ ಇರಲಿಲ್ಲ. ಆರೋಗ್ಯ ಸ್ಥಿತಿ ತೀರಾ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಕಾಲೇಜಿನ ಅಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಇಂದು 66 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,250 ಕ್ಕೆ ಏರಿಕೆ ಕಂಡಿದೆ.

Share This Article
Leave a Comment

Leave a Reply

Your email address will not be published. Required fields are marked *