ಲಕ್ನೋ: ನರ್ಸ್ ಫೋನ್‍ನಲ್ಲಿ ಮಾತನಾಡುತ್ತಾ ಒಂದೇ ಬಾರಿಗೆ 2 ಡೋಸ್ ಲಸಿಕೆ ನೀಡಿರುವ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಅಕ್ಬಾರಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಮಲೇಶ್ ಕುಮಾರಿ(50) ಲಸಿಕೆ ಪಡೆಯಲು ತೆರಳಿದ್ದಾರೆ. ನರ್ಸ್ ನಿರ್ಲಕ್ಷ್ಯದಿಂದ ಫೋನ್‍ನಲ್ಲಿ ಮಾತನಾಡುತ್ತಾ 2 ಡೋಸ್ ಲಸಿಕೆಯನ್ನು ಒಟ್ಟಿಗೆ ನೀಡಿದ್ದಾರೆ.
ಲಸಿಕೆ ಪಡೆಯಲು ಕಮಲೇಶ್ ಕುಮಾರಿ ಆಸ್ಪತ್ರೆಗೆ ಹೋಗಿದ್ದರು. ಆದರೆ ನರ್ಸ್ ಮಾತ್ರ ಫೋನ್‍ನಲ್ಲಿ ಮಾತನಾಡುತ್ತಾ ಬ್ಯುಸಿಯಾಗಿದ್ದಾರೆ. ಅಲ್ಲದೆ ಫೋನ್ ಕಟ್ ಮಾಡದೇ ನರ್ಸ್ ಮಾತು ಮುಂದುವರಿಸಿದ್ದಾರೆ. ಇತ್ತ ಕಮಲೇಶ್ ಕುಮಾರಿಗೆ ಒಂದು ಡೋಸ್ ಬದಲು ಎರಡು ಡೋಸ್ ಲಸಿಕೆ ನೀಡಿದ್ದಾರೆ.
2ನೇ ಡೋಸ್ ನೀಡಿದ ಬೆನ್ನಲ್ಲೇ ನರ್ಸ್‍ಗೆ ತಪ್ಪಿನ ಅರಿವಾಗಿದೆ. ತಕ್ಷಣವೇ ಕ್ಷಮೆ ಕೇಳಿದ್ದಾರೆ. ಇಷ್ಟೇ ಅಲ್ಲ ಆರೋಗ್ಯ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ನರ್ಸ್ 2 ಡೋಸ್ ಲಸಿಕೆ ನೀಡಿರುವ ವಿಚಾರ ಮಹಿಳೆ ಮನೆಗೆ ತಿಳಿದು ಕುಟುಂಬಸ್ಥರು ಆರೋಗ್ಯ ಕೇಂದ್ರಕ್ಕೆ ತೆರಳಿ ಜಗಳ ಮಾಡಿದ್ದಾರೆ.
ಆರೋಗ್ಯ ಕೇಂದ್ರದ ವೈದ್ಯರು ಕಮಲೇಶ್ ಕುಮಾರಿ ತಪಾಸಣೆ ನಡೆಸಿ ಕುಟುಂಬಸ್ಥರನ್ನು ಸಮಾಧಾನಪಡಿಸಿದ್ದಾರೆ. 2 ಡೋಸ್ ಪಡೆದ ಕಾರಣ ಕೈ ಊದಿಕೊಂಡಿದೆ. ಮಹಿಳೆಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಕುಟುಂಬಸ್ಥರು ಕೊಂಚ ಸಮಾಧಾನಗೊಂಡಿದ್ದಾರೆ.