ರಾಯಚೂರು: ಮಸ್ಕಿ ಉಪಚುನಾವಣೆ ಹಿನ್ನೆಲೆ ಪ್ರಚಾರ ರಂಗೇರಿದ್ದು, ಇದೇ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲೆಯ ಮಸ್ಕಿಯ ಹಡಗಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಲಾಟೆಯಲ್ಲಿ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರಿಗೆ ಗಾಯಗಳಾಗಿವೆ. ಬಿಜೆಪಿ ಕಾರ್ಯಕರ್ತರಾದ ಅಶೋಕ, ವೆಂಕನಗೌಡ, ಅಂಬರೇಶ್, ತಿಮ್ಮನಗೌಡ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಶರಣಬಸವ ಹಾಗೂ ಬಸವರಾಜ ಮಸ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಬೆಳಗ್ಗೆ ಹಡಗಲಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪ್ರಚಾರ ನಡೆಸಿದ್ದ ವೇಳೆ ಅಡ್ಡಿಪಡಿಸಿದ್ದಾರೆ ಎಂದು ಗಲಾಟೆ ಶುರುವಾಗಿ, ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ, ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಪ್ರಚಾರದ ಅಬ್ಬರದ ನಡುವೆ ರಂಗೇರುತ್ತಿರುವ ಮಸ್ಕಿ ಉಪಚುನಾವಣೆ ಕಣದಲ್ಲಿ ಕಾರ್ಯಕರ್ತರ ಜಗಳ ಸಹ ಆರಂಭವಾಗಿವೆ.