ಮಂಡ್ಯ: ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 7 ಜನ ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ಮಂಡ್ಯದ 1ನೇ ಹೆಚ್ಚುವರಿ ಸಿವಿಲ್ ಜೆಎಂಎಫ್‍ಸಿ ಕೋರ್ಟ್ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
2006 ಕ್ಕೂ ಮೊದಲು ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಾಲ್ವರು ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರಾಜಸ್ವ ಹಣವನ್ನು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ತಲಾ 4 ವರ್ಷ ಜೈಲು ಹಾಗೂ ದಂಡವನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಕರಣದಲ್ಲಿ ಮೂವರು ಪತ್ರ ಬರಹಗಾರಗಾರರು ಭಾಗಿಯಾಗಿರುವ ಹಿನ್ನೆಲೆ ಅವರಿಗೆ ತಲಾ 5 ವರ್ಷ ಶಿಕ್ಷೆ ಹಾಗೂ 1 ಕೋಟಿ 29 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿದೆ.
ಎಸ್ಎನ್ ಪ್ರಭಾ, ಚೆಲುವರಾಜು, ಲೀಲಾವತಿ ಹಾಗೂ ಸುನಂದಾ ಶಿಕ್ಷೆಗೊಳಗಾದ ಉಪ ನೋಂದಣಾಧಿಕಾರಿಯಾಗಿದ್ದಾರೆ. ಬಿಕೆ ರಾಮರಾವ್, ನರಸಿಂಹಮೂರ್ತಿ ಹಾಗೂ ಚಂದ್ರಶೇಖರ್ ಪತ್ರಬರಹಗಾರರು. ಇವರುಗಳು ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗ ಮಾಡಿದ್ದಾರೆ ಎಂದು 2006 ರಲ್ಲಿ ಉಪ ನೋಂದಣಾಧಿಕಾರಿಯಾದ್ದ ನರಸಿಂಹಯ್ಯ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸದ್ಯ ರಾಜ್ಯದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದೋಷಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.