ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 40 ಕೊರೊನಾ ಕೇಸ್‍ಗಳು ದಾಖಲಾಗಿವೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಫಲಿತಾಂಶವನ್ನು ಕಡ್ಡಾಯಗೊಳಿಸಿದೆ.
ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ರಾಜಧಾನಿಯಿಂದ ಬರುವ ಜನರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯಮಾಡಿರುವ ಜಿಲ್ಲಾಡಳಿತ, ಪರೀಕ್ಷೆ ಮಾಡದೆ ಬಂದಿದ್ದರೆ ಅಂತವರು ತಾಲೂಕಿನ ಕೈಮರ ಚೆಕ್‍ಪೋಸ್ಟ್ ನಲ್ಲಿ ಪರೀಕ್ಷೆಗೆ ಒಳಪಟ್ಟು ಮುಂದೆ ಸಾಗಬೇಕಿದೆ. ಕೆಲ ಪ್ರವಾಸಿಗರು ಕೋವಿಡ್ ಟೆಸ್ಟ್ ಗೆ ಒಳಪಡಲು ಹಿಂದೇಟು ಹಾಕುತ್ತಿದ್ದು ಅವರನ್ನು ಅಧಿಕಾರಿಗಳು ವಾಪಸ್ ಕಳಿಸುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಆಗಿರುವುದರಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ನೂರಾರು ಪ್ರವಾಸಿಗರು ಬಂದಿದ್ದಾರೆ. ಅವರಲ್ಲಿ ಬಹುತೇಕರು ಕೋವಿಡ್ ಟೆಸ್ಟ್ ರಿಪೋರ್ಟ್ ತಂದಿಲ್ಲ. ಅವರನ್ನು ಸ್ಥಳದಲ್ಲೇ ಚೆಕ್ ಮಾಡಿ ಅಧಿಕಾರಿಗಳು ಗಿರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.
ಶನಿವಾರ ಸುಮಾರು ಆರು ಜನರಿಗೆ ಹಾಗೂ ಭಾನುವಾರ ಇಬ್ಬರು ಪ್ರವಾಸಿಗರಿಗೆ ರ್ಯಾಪಿಡ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿದ್ದು ಅವರನ್ನು ಪ್ರವಾಸಿ ತಾಣಕ್ಕೆ ತೆರಳಲು ಅವಕಾಶ ಕೊಡದೆ ವಾಪಸ್ ಕಳಿಸಿದ್ದಾರೆ. ಕೆಲ ಪ್ರವಾಸಿಗರು ಪರೀಕ್ಷೆಗೆ ಒಳಪಡದೆ ಆರೋಗ್ಯ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇಂದು ಕೂಡ 150ಕ್ಕೂ ಹೆಚ್ಚು ಕಾರುಗಳು ಜಿಲ್ಲೆಯ ಗಿರಿಭಾಗಕ್ಕೆ ಹೋಗಿವೆ. ಶನಿವಾರ ಹಾಗೂ ಭಾನುವಾರ ಎರಡು ದಿನವೂ ಕೈಮರ ಚೆಕ್‍ಪೋಸ್ಟ್ ನಲ್ಲಿ ಇರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಎಲ್ಲರನ್ನೂ ಪರೀಕ್ಷೆ ಮಾಡಿ ಗಿರಿ ಭಾಗಕ್ಕೆ ಕಳಿಸುತ್ತಿದ್ದಾರೆ. ಹೊರರಾಜ್ಯದ ಪ್ರವಾಸಿಗರು ಕೋವಿಡ್ ರಿಪೋರ್ಟ್ ಕಡ್ಡಾಯವಾಗಿದೆ. ರಿಪೋರ್ಟ್ ಇಲ್ಲದೆ ಬಂದವರಿಗೂ ಟೆಸ್ಟ್ ನಡೆಯುತ್ತಿದ್ದು ನೆಗಿಟಿವ್ ಬಂದರಷ್ಟೇ ಗಿರಿ ಭಾಗಕ್ಕೆ ಪ್ರವೇಶ ನೀಡಲಾಗುತ್ತಿದೆ. ಕೆಲ ಪಾಸಿಟಿವ್ ಬಂದ ಪ್ರವಾಸಿಗರು ಮತ್ತೆ..ಮತ್ತೆ, ಚೆಕ್ ಮಾಡುವಂತೆ ಆರೋಗ್ಯ ಸಿಬ್ಬಂದಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಆದರೆ, ಸ್ಥಳದಲ್ಲೇ ಇರುವ ಪೊಲೀಸರು ಪಾಸಿಟಿವ್ ಬಂದವರನ್ನು ವಾಪಸ್ ಕಳಿಸುವ ಕಾರ್ಯ ಮಾಡುತ್ತಿದ್ದಾರೆ.