ಡಿ.ಕೆ.ಶಿವಕುಮಾರ್ ಒಳ್ಳೆಯವರು, ರಾಜೀನಾಮೆ ನೀಡಬಾರದು: ರಮೇಶ್ ಜಾರಕಿಹೊಳಿ

Public TV
1 Min Read
dk shivakumar ramesh jarkiholi

– ನಾಳೆ ಸಂಜೆ ಇನ್ನೂ ದೊಡ್ಡದು ಹೊರ ಬರುತ್ತೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ, ಇನ್ನು ಮುಂದೆ ನೋಡೋಣ. ನನ್ನಂತೆ ಅವರಿಗೆ ಅನ್ಯಾಯವಾಗುವುದು ಬೇಡ, ಅವರು ಒಳ್ಳೆಯವರು, ರಾಜೀನಾಮೆ ನೀಡಬಾರದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ಮೇಲೆ ಅನುಕಂಪ ತೋರಿಸಿದ್ದಾರೆ.

ಸಿಡಿ ಲೇಡಿಯವರದ್ದು ಎನ್ನಲಾದ ಫೋನ್ ಕಾಲ್ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದ್ದು, ಇದರಿಂದಾಗಿ ಸಿಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ. ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ಡಿಕೆಶಿ ನನ್ನ ಹಳೆಯ ಗೆಳೆಯ, ಇನ್ನು ಮುಂದೆ ನೋಡೋಣ, ಅವನಿಗೆ ತೊಂದರೆಬಾರದು ಎಂದು ಹೇಳಿದ್ದಾರೆ.

ಫೋನ್ ಕಾಲ್ ಆಡಿಯೋದಲ್ಲಿ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದೆ. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ಅವರಿಗೆ ಅನ್ಯಾಯ ಆಗೋದು ಬೇಡ. ನನ್ನಂತೆ  ರಾಜಿನಾಮೆ ಕೊಡುವುದು ಬೇಡ, ಅವರು ಚೆನ್ನಾಗಿರಲಿ. ನನ್ನ ಹಳೆಯ ಸ್ನೇಹಿತರು, ಕಷ್ಟದಲ್ಲಿ ನನ್ನ ಜೊತೆಗಿದ್ದರು. ಅವರು ರಾಜ್ಯ ಸುತ್ತಬೇಕು, ರಾಜೀನಾಮೆ ನೀಡುವುದು ಬೇಡ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ದೊಡ್ಡ ಸುದ್ದಿ ಬಹಿರಂಗ
ನಾಳೆ ಸಂಜೆವರೆಗೂ ಕಾದು ನೋಡಿ, ಇನ್ನು ದೊಡ್ಡ ಪ್ರಮಾಣದಲ್ಲಿ ಎಲ್ಲ ರಿಲೀಸ್ ಆಗಲಿದೆ. ನಾಳೆ 4 ರಿಂದ 6 ಗಂಟೆಗೆ ದೊಡ್ಡ ವಿಷಯ ಬಹಿರಂಗ ಮಾಡುತ್ತೇನೆ. ನಾಳೆ ಇನ್ನು ದೊಡ್ಡದು ಹೊರಗೆ ಬರುತ್ತೆ. ಇಂದು ರಿಲೀಸ್ ಆಗಿರುವ ಆಡಿಯೋಗೂ ನಮಗೂ ಸಂಬಂಧವಿಲ್ಲ. ನಾಳೆವರೆಗೂ ಮಾತನಾಡಬೇಡಿ ಎಂದು ವಕೀಲರು ಹೇಳಿದ್ದಾರೆ. ನಾಳೆ 4-6 ಗಂಟೆಗೆ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಕಾದು ನೋಡಿ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

302 ಕೇಸ್ ದಾಖಲಿಸಲಿ ನಾನು ಹೆದರುವುದಿಲ್ಲ. ಎಫ್‍ಐಆರ್ ಹಾಕಿದ ತಕ್ಷಣ ಆರೋಪಿ ಅಲ್ಲ. ನಾನು ಯಾವುದೇ ಕಾರಣಕ್ಕೂ ಜಾಮೀನು ಪಡೆಯುವುದಿಲ್ಲ. ನನ್ನ ಎಫ್‍ಐಆರ್ ಮೊದಲು ತನಿಖೆ ಆಗಬೇಕು, ನನ್ನ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *